

ಶ್ರವಣ ಕುಮಾರ್ ನಾಳ, ಮಂಗಳೂರು
ಪ್ರತೀ ದಿನ 10 ಗಂಟೆ ಕರ್ತವ್ಯ, ಮಾಸಿಕ 11 ಸಾವಿರ ರೂ.ವೇತನ, ವರ್ಷಕ್ಕೆ 8 ತಿಂಗಳು ಮಾತ್ರ ಉದ್ಯೋಗ, ಮರು ನೇಮಕಾತಿಯ ಆಮಿಷದಲ್ಲೇ ದುಡಿಸಿಕೊಳ್ಳುವ ಪ್ರಾಂಶುಪಾಲರು, ಇಂತಹ ಸ್ಥಿತಿಯಿದ್ದರೂ, ತಮ್ಮನ್ನು ಕೇಳುವವರೇ ಇಲ್ಲ ಎಂಬ ಕಾರಣ ಮುಂದಿಟ್ಟು ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧೀನದಲ್ಲಿ 1229+29 ಪದವಿಪೂರ್ವ ಕಾಲೇಜುಗಳಿದ್ದು, ಉಪನ್ಯಾಸಕರ ಹುದ್ದೆ ಹಲವು ವರ್ಷಗಳಿಂದ ಖಾಲಿಯಿದೆ. ಪಿಯು ಶೈಕ್ಷಣಿಕ ಮಟ್ಟವನ್ನು ಹೆಚ್ಚುಸುವ ಉದ್ದೇಶದಿಂದ ರಾಜ್ಯಾದ್ಯಂತ 1258 ಪದವಿಪೂರ್ವ ಕಾಲೇಜುಗಳಲ್ಲಿರುವ ಅಗತ್ಯ ಹುದ್ದೆಗಳಿಗೆ 3,527 ಅತಿಥಿ ಉಪನ್ಯಾಸಕರನ್ನು ಷರತ್ತಿನ ಮೇಲೆ ಆಯ್ಕೆ ಮಾಡಿ ನಿಯೋಜನೆಗೊಳಿಸಲಾಗಿದೆ. ಹೆಚ್ಚುವರಿ ಕೆಲಸ, ಕಡಿಮೆ ವೇತನ ಈ ಅತಿಥಿ ಉಪನ್ಯಾಸಕರಿಗೆ ಹೊರೆಯಾಗಿದೆ.
11 ಸಾವಿರ ರೂ. ಸಂಬಳ: ವಾರದಲ್ಲಿ 10 ಗಂಟೆ ಕರ್ತವ್ಯ, ಮಾಸಿಕ 11 ಸಾವಿರ ರೂ.ವೇತನ ನೀಡುವ ಒಪ್ಪಂದದ ಆಧಾರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ 2021-22ರಲ್ಲಿ ಅತಿಥಿ ಉಪನ್ಯಾಸಕರನು ಆಯ್ಕೆ ಮಾಡಿಕೊಂಡಿತ್ತು. ಅತಿಥಿ ಉಪನ್ಯಾಸಕರಾಗಿ ಆಯಕೆಯಾದ ಅಭ್ಯರ್ಥಿ ಆಯಾ ಕಾಲೇಜಿನಲ್ಲಿ ಷರತ್ತಿನಂತೆ ವಾರದಲ್ಲಿ 10 ಗಂಟೆ ಕರ್ತವ್ಯ ಮಾಡಬೇಕು, ಆದರೆ ಅಲ್ಲಿನ ಪ್ರಾಚಾರ್ಯರು ಇವರನ್ನು ಸರ್ಕಾರಿ ರಜೆ, ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲೂ (ದಿನದಲ್ಲಿ 9ರಿಂದ 10ಗಂಟೆ) ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ, ಒಂದು ವೇಳೆ ಈ ರೀತಿ ಕರ್ತವ್ಯ ನಿರ್ವಹಿಸದಿದ್ದರೆ ಮುಂದಿನ ಬಾರಿ ಮರುನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂಬ ಎಂಬ ಆರೋಪ ಕೇಳಿಬರುತ್ತಿದೆ. ಹೀಗೆ ದುಡಿದರೂ ವೇತನ ಮಾತ್ರ 11 ಸಾವಿರ ರೂ.ದಾಟುತ್ತಿಲ್ಲ.
ವಿಳಂಬ ವೇತನ ಇನ್ನೊಂದು ಸಮಸ್ಯೆ
ಪಿಯು ಶೈಕ್ಷಣಿಕ ವರ್ಷ ಜೂನ್ ಮೊದಲ ವಾರ ಆರಂಭಗೊಂಡು ಫೆಬ್ರವರಿ-ಮಾರ್ಚ್ನಲ್ಲಿ ಕೊನೆಗೊಳ್ಳುತ್ತದೆ. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಉಪನ್ಯಾಸಕರಾಗಿದ್ದವರು ಶೈಕ್ಷಣಿಕ ವರ್ಷ ಆರಂಭದಲ್ಲಿ ಆಯಾ ಕಾಲೇಜು ಪ್ರಚಾರ್ಯರ ಅನುಮತಿ ಮೇರೆಗೆ ಹಾಜರಾಗುತ್ತಾರೆ. ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ನಡೆಯುವುದು ಆಗಸ್ಟ್ನಲ್ಲಿ. ಇದೇ ಆಧಾರದಲ್ಲಿ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಆಗಸ್ಟ್ನಿಂದ ಫೆಬ್ರವರಿವರೆಗೆ ಮಾತ್ರ ವೇತನ ನೀಡುತ್ತದೆ. ಈ ವೇತನವೂ 2-3 ತಿಂಗಳು ತಡವಾಗಿ ಅತಿಥಿ ಉಪನ್ಯಾಸಕರ ಖಾತೆಗೆ ಜಮೆಯಾಗುತ್ತದೆ.
ರಾಜ್ಯದಲ್ಲಿ 3,527 ಅತಿಥಿ ಉಪನ್ಯಾಸಕರಿದ್ದಾರೆ. ಹೆಚ್ಚುವರಿ ಕರ್ತವ್ಯ ಮಾಡಿದರೂ ಸಿಗುವುದು ಮಾಸಿಕ 11 ಸಾವಿರ ರೂ.ಸಂಬಳ. ಈ ವೇತನವೂ 2-3 ತಿಂಗಳು ತಡವಾಗಿ ಖಾತೆಗೆ ಜಮೆವಾಗುತ್ತದೆ. ಪಿಯು ಶೈಕ್ಷಣಿಕ ವರ್ಷ ಆರಂಭದಲ್ಲೇ ಅತಿಥಿ ಉಪನ್ಯಾಸಕರ ಆಯ್ಕೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಪ್ರಯೋಜನ ಆಗಿಲ್ಲ.
ರಾಜೇಶ್ ಭಟ್,ರಾಜ್ಯ ಕಾರ್ಯದರ್ಶಿ,
ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ಸಂಘ