ಲೋಕಸಭೆಗೆ ಕೈ ಹಿಡಿಯಲಿರುವ ಗ್ಯಾರಂಟಿಗಳು

meti
Published on

ಬಾಗಲಕೋಟೆ: ರಾಜ್ಯ ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ನೆರವು ಆಗಲಿದೆ ಎಂದು ಶಾಸಕ ಎಚ್.ವೈ.ಮೇಟಿ ವಿಶ್ವಾಸ ವ್ಯಕ್ತಪಡಿಸಿದರು.

ಬಾಗಲಕೋಟೆ ಕಾಂಗ್ರೆಸ್ ಪಕ್ಷದ ಹಳೇ ಕಚೇರಿಯಲ್ಲಿ ಭಾನುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಕಳೆದ 20 ವರ್ಷದಿಂದ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಕಂಡಿಲ್ಲ. ಈ ಸಲ ಪಕ್ಷಕ್ಕೆ ಉತ್ತಮ ವಾತಾವರಣ ಇದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಖಂಡಿತ ಗೆಲುವು ಪಡೆಯಲಿದೆ. ಪಕ್ಷ ಯಾರನ್ನೇ ಅಭ್ಯರ್ಥಿಯಾಗಿ ಮಾಡಿದರೂ ಗೆಲುವು ಪಡೆಯಲಿದೆ. ಸದ್ಯ ಯಾರೆಲ್ಲ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ ಎನ್ನುವುದು ತಮಗೆ ಮಾಹಿತಿ ಇಲ್ಲ. ಮೂರ್ನಾಲ್ಕು ಜನ ಇರುಬಹುದೇನೋ ಎಂದರು.

ಸಿದ್ದು ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಆಗಿಲ್ಲ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆ ಆಗಿತ್ತು. ಈಗ ಅವರೇ ಮುಖ್ಯಮಂತ್ರಿ ಆಗಿದ್ದರಿಂದ ನಮಗೇನು ಸಿಗಬೇಕು? ನನಗೆ ಕೊನೆಯ ಸಾರಿ ಶಾಸಕ ಆಗಬೇಕು ಎಂದುಕೊಂಡಿದ್ದೆ, ಆಗಿದ್ದೇನೆ. ನನಗೂ ಈಗ 78 ವಯಸ್ಸು ಆಗಿದೆ. ಮಂತ್ರಿಯಾದರೆ ರಾಜ್ಯ ಸುತ್ತಬೇಕಲ್ವ? ಸಚಿವನಾದರೆ ಕ್ಷೇತ್ರದ ಕಡೆಗೆ ಹೆಚ್ಚು ಒತ್ತು ಕೊಡಲು ಆಗಲ್ಲ. ಬಾಗಲಕೋಟೆ ಕ್ಷೇತ್ರವನ್ನು ಹೆಚ್ಚೆಚ್ಚು ಅಭಿವೃದ್ಧಿ ಪಡಿಸಬೇಕಿದೆ. ಅದಕ್ಕಾಗಿ ಕ್ಷೇತ್ರಕ್ಕೆ ಒತ್ತು ಕೊಡುತ್ತೇನೆ ಎಂದು ತಿಳಿಸಿದರು.

ಬಿಟಿಡಿಎ ಅಧ್ಯಕ್ಷರನ್ನ ನೇಮಕ ಮಾಡಿಸೋಣ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕವನ್ನು ಬೇಗ ಮಾಡಿಸುವ ಕಡೆಗೆ ಗಮನ ಇದೆ. ಸದ್ಯ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಆಗಿಲ್ಲ. ಮುಂದೆ ಪರಿಸ್ಥಿತಿ ಹೇಗೆ ಬರುತ್ತದೆ ನೋಡೋಣ. ಪಕ್ಷದ ಮುಖಂಡರು, ಕಾರ್ಯಕರ್ತರ ಜತೆ ಚರ್ಚಿಸಿ ಆಯ್ಕೆ ಮಾಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕ ಮೇಟಿ, ಖಾಲಿ ಇರುವ ಪುನ ರ್ವಸತಿ ಅಧಿಕಾರಿ ಹುದ್ದೆಯನ್ನು ಭರ್ತಿ ಮಾಡಲಾಗುವುದು. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಬೇಗ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದರು.

ನಮ್ಮದು ಹಗರಣ ಇಲ್ಲದ ಸರ್ಕಾರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 3 ತಿಂಗಳು ಆಗುತ್ತ ಬಂದಿದೆ. ಯಾವುದೇ ಹಗರಣ ಇಲ್ಲದೆ ಉತ್ತಮ ಆಡಳಿತ ನಡೆಯುತ್ತದೆ. ಒಳ್ಳೆಯ ಬಜೆಟ್ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಮುಖ್ಯಮಂತ್ರಿಗಳು ಸೇರಿ ಸಚಿವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಯಾವುದೇ ಆಪಾದನೆಗೆ ಅವಕಾಶ ಕೊಡದೆ ಉತ್ತಮ ಆಡಳಿತ ನೀಡುತ್ತಿದೆ ಎಂದು ಮೇಟಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net