More

    ಜಿಎಸ್​​ಟಿ ಇನ್ನಷ್ಟು ದುಬಾರಿ ಸಾಧ್ಯತೆ: ಇಂದು-ನಾಳೆ ಮಂಡಳಿಯ 47ನೇ ಸಭೆ; ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ..

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಪದ್ಧತಿಯಲ್ಲಿ (ಜಿಎಸ್​ಟಿ) ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ನಿರೀಕ್ಷಿಸಲಾಗಿರುವ ಜಿಎಸ್​ಟಿ ಮಂಡಳಿಯ 47ನೇ ಸಭೆ ಚಂಡೀಗಢದಲ್ಲಿ ಮಂಗಳವಾರ ಮತ್ತು ಬುಧವಾರ ನಡೆಯಲಿದೆ. ಕೆಲವು ವಸ್ತುಗಳ ತೆರಿಗೆ ಏರಿಕೆ ಹಾಗೂ ತೆರಿಗೆ ಸ್ಲ್ಯಾಬ್​ಗಳ ವಿಲೀನದ ಬಗ್ಗೆ ನಿರ್ಣಯವಾಗುವ ಸಾಧ್ಯತೆ ಇದೆ. ಸ್ಲ್ಯಾಬ್ ವಿಲೀನವಾದಲ್ಲಿ ಕೆಲ ವಸ್ತುಗಳ ತೆರಿಗೆ ಹೆಚ್ಚಿದರೆ, ಕೆಲವದರ ತೆರಿಗೆ ಈಗಿನದಕ್ಕಿಂತ ಕಡಿಮೆಯಾಗುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ರಾಜ್ಯಗಳಿಗೆ ತೆರಿಗೆ ಸಂಗ್ರಹದಲ್ಲಾಗುತ್ತಿರುವ ಕೊರತೆಗೆ ಪರಿಹಾರ ನೀಡಿಕೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸೇವೆ ಮತ್ತು ಸಾಮಗ್ರಿಗಳ ಮೇಲಿನ ಕರ ಇಳಿಕೆ ಹಾಗೂ ತೆರಿಗೆ ಸಂಬಂಧಿ ನಿಯಮಗಳ ಸರಳೀಕರಣದ ನಿರೀಕ್ಷೆ ಇದೆ. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಮಿತಿ ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಅಧ್ಯಕ್ಷತೆಯ ಸಮಿತಿಗಳ ಮಧ್ಯಂತರ ವರದಿ ಸಭೆಯಲ್ಲಿ ಮಂಡನೆಯಾಗಲಿದ್ದು, ಈ ಶಿಫಾರಸುಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ತೆರಿಗೆಯಲ್ಲಿನ ವೈಪರೀತ್ಯ ಸರಿಪಡಿಸಲು ಕೆಲವು ವಸ್ತು ಮತ್ತು ಸೇವೆಗೆ ನೀಡಲಾಗಿರುವ ಕರ ವಿನಾಯಿತಿಯನ್ನು ಕೈಬಿಡಬೇಕು ಎಂದೂ ಬೊಮ್ಮಾಯಿ ನೇತೃತ್ವದ ಸಮಿತಿ ಸಲಹೆ ನೀಡಿದೆ; ಕ್ಯಾಸಿನೊ, ಆನ್​ಲೈನ್ ಗೇಮ್್ಸ, ಕುದುರೆ ಜೂಜು ಮೇಲೆ ಗರಿಷ್ಠ ತೆರಿಗೆ ಹಾಕಬೇಕು ಎಂದು ಸಂಗ್ಮಾ ಅಧ್ಯಕ್ಷತೆ ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.

    ಯಾವುದಕ್ಕೆ ತೆರಿಗೆ ಏರಿಕೆ?: ನೀರಿನ ಪಂಪ್, ಡೇರಿ ಯಂತ್ರಗಳು, ಚರ್ಮದಿಂದ ತಯಾರಾದ ವಸ್ತು, ಸೋಲಾರ್ ವಾಟರ್ ಪಂಪ್, ಐದು ಸಾವಿರ ರೂ.ಗಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆ ವಾರ್ಡ್​ಗೆ ಶೇ.5 ಸೇವಾ ಕರ, ಒಂದು ಸಾವಿರ ರೂ.ಗಿಂತ ಕಡಿಮೆ ಬಾಡಿಗೆ ಇರುವ ಹೋಟೆಲ್ ವಸತಿಗೆ ಶೇ.12 ತೆರಿಗೆ, ಮುದ್ರಣ, ಬರವಣಿಗೆ ಮತ್ತು ಡ್ರಾಯಿಂಗ್​ಗೆ ಬಳಕೆಯಾಗುವ ಶಾಯಿ, ಕೆಲವು ಮಾದರಿಯ ಚಾಕು, ಚಮಚ, ಟೇಬಲ್ ಹಾಸುಗಳು, ಎಲ್​ಇಡಿ ಬಲ್ಬ್, ಡ್ರಾಯಿಂಗ್ ಸಾಧನಗಳ ತೆರಿಗೆ ಶೇ. 12ರಿಂದ 18ಕ್ಕೆ ಏರುವ ಸಂಭವ. ಸೇವಾ ವಲಯದಲ್ಲಿ ಹೊರಗುತ್ತಿಗೆ ಮೇಲಿನ ಕರ ಶೇ.5ರಿಂದ 12ಕ್ಕೆ ಅಥವಾ ಶೇ.12ರಿಂದ 18ಕ್ಕೆ ಹೆಚ್ಚಳ ಆಗುವ ಸಾಧ್ಯತೆ.

    ಕ್ಯಾಸಿನೊ, ಆನ್​ಲೈನ್ ಗೇಮ್್ಸ, ಕುದುರೆ ರೇಸ್​ಗಳಿಗೆ ಶೇ.28 ತೆರಿಗೆ ವಿಧಿಸಲು ಮಂಡಳಿ ನಿಶ್ಚಯಿಸಬಹುದು. ಬಿಜಿನೆಸ್ ಟು ಬಿಜಿನೆಸ್ (ಬಿಟುಬಿ) ವ್ಯವಹಾರಕ್ಕೆ ಇದ್ದ ತೆರಿಗೆ ವಿನಾಯಿತಿ ರದ್ದುಗೊಳಿಸಲು ಸಮಿತಿ ಶಿಫಾರಸು ಮಾಡಿದೆ. 20 ಲಕ್ಷ ರೂಪಾಯಿಯೊಳಗೆ ವಾರ್ಷಿಕ ವಹಿವಾಟು ನಡೆಸುವ ಬಿಜಿನೆಸ್​ಗಳಿಗೆ ನೋಂದಣಿಯಿಂದ ವಿನಾಯಿತಿಗೆ ಶಿಫಾರಸು ಮಾಡಲಾಗಿದೆ.

    ಪರಿಹಾರ ಅವಧಿ ವಿಸ್ತರಣೆಗೆ ಆಗ್ರಹ

    2017ರ ಜುಲೈ 1ರಂದು ಜಿಎಸ್​ಟಿ ಜಾರಿಯಾದ ತರುವಾಯ ಬಹುತೇಕ ತೆರಿಗೆಗಳ ವಿಲೀನದ ಕಾರಣ ರಾಜ್ಯ ಸರ್ಕಾರಗಳಿಗೆ ತೆರಿಗೆ ಸಂಗ್ರಹದಲ್ಲಿ ನಷ್ಟವಾಯಿತು. ಇದನ್ನು ಸರಿದೂಗಿಸಲು ಐದು ವರ್ಷಗಳ ರಾಜ್ಯಗಳಿಗೆ ಜಿಎಸ್​ಟಿ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಇದು ಈ ಜೂನ್ 30ಕ್ಕೆ ಅಂತ್ಯವಾಗಲಿದೆ. ಇದನ್ನು ಮುಂದುವರಿಸಬೇಕು ಎಂಬುದು ಬಹುತೇಕ ರಾಜ್ಯಗಳ ಬೇಡಿಕೆ.

    ಐದು ವರ್ಷದಿಂದ ಪರಿಹಾರ ಸೆಸ್ ನಿಧಿಯಿಂದ ಕೇಂದ್ರ ನೆರವನ್ನು ಒದಗಿಸುತ್ತಿದೆ. ಪ್ರತಿ ವರ್ಷ ಶೇಕಡ 14 ಬೆಳವಣಿಗೆಯಲ್ಲಿ ಈ ಪರಿಹಾರ ಸಂಯೋಜಿತವಾಗುತ್ತಿದೆ. ಆದರೆ, ಇದೇ ಪ್ರಮಾಣದಲ್ಲಿ ಸೆಸ್ ಆಕರದಲ್ಲಿ ಏರಿಕೆ ಆಗುತ್ತಿಲ್ಲ. ಈ ಮಧ್ಯೆ, ಜಿಎಸ್​ಟಿ ಲೆವಿ ಬಾಬ್ತಿನ ಪರಿಹಾರವನ್ನು 2026ರ ಮಾರ್ಚ್​ವರೆಗೆ ಕೇಂದ್ರ ಸರ್ಕಾರ ಮುಂದುವರಿಸುವುದಾಗಿ ಶನಿವಾರ ಅಧಿಸೂಚನೆ ಹೊರಡಿಸಿದೆ. ಆದರೆ, ಇದು ರಾಜ್ಯಗಳಿಗೆ ನೇರವಾಗಿ ದೊರೆಯುವುದಿಲ್ಲ. ಕರೊನಾ ಸಂದರ್ಭದಲ್ಲಿ ಜಿಎಸ್​ಟಿ ಪರಿಹಾರದಲ್ಲಿನ ಕೊರತೆಯನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಆರ್​ಬಿಐನಿಂದ ಪಡೆದ 1.10 ಲಕ್ಷ ಕೋಟಿ ರೂ. (2020-21ರ ಅವಧಿ) ಮತ್ತು 1.59 ಲಕ್ಷ ಕೋಟಿ ರೂ. (2021-22ರ ಅವಧಿ) ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಿದೆ.

    ಸ್ಲ್ಯಾಬ್​ ವಿಲೀನ?: ಜಿಎಸ್​ಟಿಯಲ್ಲಿ ಹಾಲಿ ಶೇಕಡ 5, 12, 18, ಮತ್ತು 28ರ ಶ್ರೇಣಿಯಲ್ಲಿ ತೆರಿಗೆಯನ್ನು ವರ್ಗೀಕರಿಸಲಾಗಿದೆ. ಚಿನ್ನ, ಬೆಲೆಬಾಳುವ ಹರಳುಗಳಿಗೆ ಪ್ರತ್ಯೇಕವಾದ ಶ್ರೇಣಿ ಇದೆ. ಇದರೊಟ್ಟಿಗೆ ಶೇ.28ರವರೆಗೂ ಸೆಸ್ (ಹೆಚ್ಚುವರಿ ಸುಂಕ) ವಿಧಿಸಲು ಅವಕಾಶ ಇದೆ. ಈ ಪದ್ಧತಿಯಲ್ಲಿ ಸುಧಾರಣೆ ತರಲು ಸಚಿವರ ಗುಂಪಿನ ಸಮಿತಿ ಶಿಫಾರಸು ಮಾಡಿದ್ದು, ಶೇ. 12ರಲ್ಲಿರುವ ಸರಕು, ಸೇವೆಗಳಲ್ಲಿ ಕೆಲವನ್ನು ಶೇ.5ಕ್ಕೆ ತರಲು ಮತ್ತೆ ಕೆಲವನ್ನು ಶೇ.18ಕ್ಕೆ ಏರಿಸಲು ಹಾಗೂ ಶೇ.5ರ ಶ್ರೇಣಿಯಲ್ಲಿರುವ ಕೆಲವನ್ನು ಶೇ.12ಕ್ಕೆ ಹೆಚ್ಚಿಸಲು ಸಲಹೆ ಮಾಡಿದೆ.

    ರಾಜ್ಯಗಳಿಗೆ ನೀಡಬೇಕಿರುವ ಜಿಎಸ್​ಟಿ ಪರಿಹಾರದ ತೊಡಕು ಮಂಡಳಿ ಸಭೆಯಲ್ಲಿ ಬಗೆಹರಿಯುವ ವಿಶ್ವಾಸ ಇದೆ. ಹಲವು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಪರಿಷ್ಕರಣೆಗೆ ಶಿಫಾರಸು ಮಾಡಲಾಗಿದ್ದು, ಇದನ್ನು ಸಭೆ ಪರಿಗಣಿಸುವ ನಿರೀಕ್ಷೆ ಇದೆ. ಆದರೆ, 215 ಸರಕುಗಳ ಮೇಲಿನ ಕರ ಯಥಾಸ್ಥಿತಿಯಲ್ಲಿ ಇರಲಿದೆ.

    | ಬಸವರಾಜ ಬೊಮ್ಮಾಯಿ ಕರ್ನಾಟಕ ಸಿಎಂ ಮತ್ತು ಜಿಎಸ್​ಟಿ ಸುಧಾರಣಾ ಸಮಿತಿ ಅಧ್ಯಕ್ಷ

    ಕ್ರಿಪ್ಟೊ ತೆರಿಗೆ ಮುಂದೂಡಲು ಸಲಹೆ: ಕ್ರಿಪ್ಟೊ ಕರೆನ್ಸಿ ಮತ್ತು ಇತರ ವರ್ಚುವಲ್ ಡಿಜಿಟಲ್ ಕರೆನ್ಸಿ ಮೇಲಿನ ಕಾನೂನು ರೂಪುಗೊಳ್ಳಬೇಕಿರುವ ಕಾರಣ ಈ ಕುರಿತ ತೆರಿಗೆ ನಿರ್ಧಾರವನ್ನು ಮುಂದೂಡುವುದು ಸೂಕ್ತ ಎಂದು ಅಧಿಕಾರಿಗಳ ಸಮಿತಿ ಸಲಹೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts