

ಜೈಪುರ: ಜಿಎಸ್‌ಟಿ ಕೌನ್ಸಿಲ್‌ನ(GST Council) 55ನೇ ಸಭೆಯಿಂದ ಸಾಮಾನ್ಯ ಜನರು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು, ಆದರೆ ಸಭೆಯ ನಂತರ ಹೊರಬಿದ್ದ ನಿರ್ಧಾರಗಳಿಂದ ಜನರು ನಿರಾಶೆಗೊಂಡಿದ್ದಾರೆ. ವಾಸ್ತವವಾಗಿ ಜಿಎಸ್‌ಟಿ ಕೌನ್ಸಿಲ್‌ನ ಈ ಸಭೆಯಿಂದ ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿ ಪ್ರೀಮಿಯಂಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಕೌನ್ಸಿಲ್ ಮುಂದೂಡಿರುವುದಾಗಿ ಅಧಿಕಾರಿಗಳು ಶನಿವಾರ(ಡಿಸೆಂಬರ್ 21) ತಿಳಿಸಿದ್ದಾರೆ.
ಸಭೆಯಲ್ಲಿ ಇನ್ನೂ ಕೆಲವು ತಾಂತ್ರಿಕ ಅಂಶಗಳನ್ನು ಪರಿಹರಿಸಬೇಕಾಗಿದೆ ಎಂದು ನಿರ್ಧರಿಸಲಾಯಿತು. ಹೆಚ್ಚಿನ ಚರ್ಚೆಗಾಗಿ ಈ ವಿಷಯವನ್ನು ಸಚಿವರ ಗುಂಪಿಗೆ (GOM)ಗೆ ಹಸ್ತಾಂತರಿಸಲಾಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯಗಳ ಅವರ ಸಹವರ್ತಿಗಳ ಸಮ್ಮುಖದಲ್ಲಿ ಕೌನ್ಸಿಲ್ ಈ ನಿರ್ಧಾರವನ್ನು ಕೈಗೊಂಡಿದೆ.
ಗ್ರೂಪ್, ವೈಯಕ್ತಿಕ, ಹಿರಿಯ ನಾಗರಿಕರ ಪಾಲಿಸಿಗಳ ಮೇಲೆ ತೆರಿಗೆ ಮುಕ್ತಗೊಳಿಸುವ ಕುರಿತು ನಿರ್ಧರಿಸಲು ವಿಮೆ ಕುರಿತು GOMಗೆ ಮತ್ತೊಂದು ಸಭೆ ನಡೆಯಲಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ. ಹೆಚ್ಚಿನ ಚರ್ಚೆ ಅಗತ್ಯವಿದೆ ಎಂದು ಕೆಲವು ಸದಸ್ಯರು ಹೇಳಿದ್ದಾರೆ. ನಾವು (GoM) ಜನವರಿಯಲ್ಲಿ ಮತ್ತೆ ಭೇಟಿಯಾಗುತ್ತೇವೆ ಎಂದು ತಿಳಿಸಿದ್ದಾರೆ.
ಕೌನ್ಸಿಲ್, ಚೌಧರಿ ಅವರ ಅಧ್ಯಕ್ಷತೆಯಲ್ಲಿ ವಿಮೆಯ ಕುರಿತು ಸಚಿವರ ಗುಂಪನ್ನು (GoM) ರಚಿಸಿದೆ. ಇದು ನವೆಂಬರ್‌ನಲ್ಲಿ ನಡೆದ ತನ್ನ ಸಭೆಯಲ್ಲಿ GST ಯಿಂದ ಟರ್ಮ್ ಜೀವ ವಿಮಾ ಪಾಲಿಸಿಗಳಿಗೆ ವಿಮಾ ಕಂತುಗಳನ್ನು ವಿನಾಯಿತಿ ನೀಡಲು ಒಪ್ಪೊಕೊಂಡಿತು. ಆದರೆ ನಿರ್ಧಾರವನ್ನು ಮುಂದೂಡಿರುವುದರಿಂದ ಈಗ ಪರಿಹಾರಕ್ಕಾಗಿ ಜನವರಿವರೆಗೆ ಕಾಯಬೇಕಿದೆ.
ಟರ್ಮ್ ಇನ್ಶೂರೆನ್ಸ್ ಅನ್ನು ದೀರ್ಘಕಾಲದವರೆಗೆ ತೆಗೆದುಕೊಳ್ಳಲಾಗುತ್ತದೆ. ಇದರ ಪ್ರೀಮಿಯಂ ಅನ್ನು ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. ಪ್ರಸ್ತುತ GST ದರಗಳ ಪ್ರಕಾರ, ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳುವಾಗ, ಅದರ ಪ್ರೀಮಿಯಂನಲ್ಲಿ 18 ಪ್ರತಿಶತ GST ಪಾವತಿಸಬೇಕಾಗುತ್ತದೆ. ಅಂತಹ ಹೆಚ್ಚಿನ ತೆರಿಗೆ ದರಗಳಿಂದಾಗಿ ಅನೇಕ ಜನರು ಟರ್ಮ್ ಇನ್ಶೂರೆನ್ಸ್ ಖರೀದಿಸುವುದನ್ನು ತಪ್ಪಿಸುತ್ತಾರೆ.
ಜಿಎಸ್‌ಟಿ ಕೌನ್ಸಿಲ್‌ನ 55ನೇ ಸಭೆಯಿಂದ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮಂತ್ರಿಗಳ ಗುಂಪು ಟರ್ಮ್ ಇನ್ಶುರೆನ್ಸ್ ಪ್ರೀಮಿಯಂ ಮೇಲಿನ 18 ಪ್ರತಿಶತ ಜಿಎಸ್‌ಟಿಯನ್ನು ಶೇಕಡಾ 5ಕ್ಕೆ ಇಳಿಸಬಹುದು ಎಂದು ಸಾಮಾನ್ಯ ಜನರು ನಿರೀಕ್ಷಿಸಿದ್ದರು. ಹೀಗೇ ಆಗಿದ್ದರೆ ಹಣದುಬ್ಬರದ ಭರಾಟೆಯಿಂದ ಜನರಿಗೆ ಕೊಂಚ ರಿಲೀಫ್ ಸಿಗುತ್ತಿತ್ತು.