

ಮಂಡ್ಯ: ಕುಟುಂಬದ ಯಜಮಾನಿಗೆ(ಮಹಿಳೆಗೆ) 2 ಸಾವಿರ ರೂ ನೀಡುವ ಸರ್ಕಾರದ ಮಹಾತ್ವಕಾಂಕ್ಷೆ ಗೃಹಲಕ್ಷ್ಮೀ ಯೋಜನೆ ಜಿಲ್ಲೆಯಲ್ಲಿ ಜು.19ರಂದು ಚಾಲನೆ ನೀಡಲಾಗುವುದು. ಅಂತೆಯೇ ಜು.20ರಿಂದ ನೋಂದಣಿ ಕಾರ್ಯಗಳು ಯಾವುದೇ ಲೋಪವಾಗದಂತೆ ನಡೆಸಲು ಗ್ರಾಮ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೋಂದಣಿಗೆ ಮಹಿಳೆಯರು ಯಾವುದೇ ಶುಲ್ಕ ನೀಡುವಂತಿಲ್ಲ. ಗ್ರಾಮಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ ಭಾಗದಲ್ಲಿ ಕರ್ನಾಟಕ ಒನ್ ಸೆಂಟರ್ ಹಾಗೂ ಹೆಚ್ಚುವರಿಯಾಗಿ ನಗರಸಭೆ ವ್ಯಾಪ್ತಿಯಲ್ಲಿ ತೆರೆಯುವ 5, ಪುರಸಭೆ ವ್ಯಾಪ್ತಿಯಲ್ಲಿ-3 ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯುವ 2 ಕೇಂದ್ರಗಳಲ್ಲಿ ನೋಂದಣಿ ನಡೆಯಲಿದೆ ಎಂದರು.
ಪ್ರತಿದಿನ ಒಂದು ಕೇಂದ್ರದಲ್ಲಿ 60 ಮಹಿಳೆಯರ ನೋಂದಣಿ ನಡೆಯಲಿದೆ. ನೂಕು ನುಗ್ಗಲೂ ಉಂಟಾಗಬಾರದೆಂದು ಮೊದಲೇ ಮಹಿಳೆಯರಿಗೆ ದಿನಾಂಕ, ಸ್ಥಳ ಮತ್ತು ಸಮಯದ ವಿವರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪಟ್ಟಿ ಸಿದ್ಧಪಡಿಸಲಾಗಿದೆ. ಎಸ್‌ಎಂಎಸ್ ಮೂಲಕ ವಿವರ ಕಳುಹಿಸಿಕೊಡಲಾಗುವುದು. ಅಂತೆಯೇ ನಿಗದಿಪಡಿಸಿರುವ ದಿನಾಂಕ ಹಾಗೂ ಕೇಂದ್ರದಲ್ಲಿ ಮಹಿಳೆಯರು ತಪ್ಪದೇ ನೋಂದಣಿ ಮಾಡಿಸಿಕೊಳ್ಳುವುದು. ನಿಗದಿಪಡಿಸಿರುವ ಸಮಯಕ್ಕೆ ಆಗಮಿಸಲು ಸಾಧ್ಯವಾಗದೇ ಇದ್ದಲ್ಲಿ ಅದೇ ದಿನ ಸಂಜೆ ಅವಧಿ ಪಡೆದು ಮಾಡಿಸಿಕೊಳ್ಳುವುದು. ಎಸ್‌ಎಂಎಸ್ ಬಾರದೇ ಕೇಂದ್ರಕ್ಕೆ ತೆರಳಿದರೇ ಕೇಂದ್ರದಲ್ಲಿ ನೋಂದಣಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಪಡಿತರ ಚೀಟಿ ಹೊಂದಿರುವ ಆಧಾರ್‌ಸೀಡಿಂಗ್ ಆಗಿರುವ ಖಾತೆಗೆ ಹಾಗೂ ಡಿಬಿಟಿ ಪಾವತಿ ಹೊಂದಿರುವ ಕುಟುಂಬದ ಯಜಮಾನಿಗೆ ಎಸ್‌ಎಂಎಸ್ ಮೂಲಕ ನೋಂದಣಿಗೆ ವಿವರ ಬರಲಿದೆ. ಆದಾಯ ತೆರಿಗೆ ಪಾವತಿಸುವ ಮಹಿಳೆ ಅಥವಾ ಕುಟುಂಬದ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದಲ್ಲಿ ಅವರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರಜಾಪ್ರತಿನಿಧಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇವರಿಗೆ ಯಾವುದೇ ರೀತಿಯ ಗೌರವಧನ ನೀಡಲಾಗುವುದಿಲ್ಲ. ಒಂದು ಸಾವಿರ ಜನಸಂಖ್ಯೆಗೆ ಇಬ್ಬರೂ ಪ್ರಜಾಪ್ರತಿನಿಧಿಯನ್ನು ನೇಮಕ ಮಾಡಲು ಅವಕಾಶವಿದೆ. ಇಬ್ಬರಲ್ಲಿ ಒಬ್ಬರೂ ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಅವರು ಎಸ್‌ಎಸ್‌ಎಲ್ಸಿ ವಿದ್ಯಾರ್ಹತೆ ಹಾಗೂ ಮೊಬೈಲ್ ಹೊಂದಿರಬೇಕು ಎಂದು ಸೂಚಿಸಿದರು.
ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಹಸೀಲ್ದಾರ್ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಸೆಂಟರ್ ಸಿಬ್ಬಂದಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಈ ಯೋಜನೆಯಡಿ ವಯಸ್ಸಾದ, ಗ್ರಾಮೀಣ ಹಾಗೂ ಅನಕ್ಷರಸ್ಥ ಮಹಿಳೆಯರು ಬರುತ್ತಾರೆ. ನೋಂದಣಿ ಕೇಂದ್ರದವರು ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಗ್ರಾಮ ಒನ್ ಸೆಂಟರ್‌ಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಮಹಿಳೆಯರಿಗೆ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ.ಕೃಷ್ಣಕುಮಾರ್ ಮಾತನಾಡಿ, ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಹಾಗೂ ತಿದ್ದುಪಡಿಯನ್ನು ತಡೆಹಿಡಿಯಲಾಗಿದೆ. ಸರ್ಕಾರ ಮುಂದಿನ ಆದೇಶದಲ್ಲಿ ತಿಳಿಸಿದ ನಂತರ ಸಾರ್ವಜನಿಕರಿಗೆ ಮಾಹಿತಿ ನೀಡಿ ಅರ್ಜಿ ಸ್ವೀಕಾರ ಹಾಗೂ ತಿದ್ದುಪಡಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ, ನಗರಸಭೆ ಆಯುಕ್ತ ಆರ್.ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ತುಷಾರಮಣಿ, ತಾಪಂ ವೇಣುಗೋಪಾಲ್ ಇತರರಿದ್ದರು.