

ಕೊಪ್ಪಳ: ಕೆಲವು ಪುಂಡರು ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೊಪ್ಪಳ ತಾಲೂಕು ಹಿಟ್ನಾಳ್ ಟೋಲ್ ಗೇಟ್ ಬಳಿ ನಡೆದಿದೆ.
ಹಿಟ್ನಾಳ್ ಟೋಲ್ ಸಿಬ್ಬಂದಿಯಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಗಂಗಾವತಿ ವಲಯದ ನೀರಿನ ಪೂರೈಕೆ ವಿಭಾಗದ ಜಿಪಂ ಇಂಜಿನಿಯರಿಂಗ್ ಎಇಇ ಚಿದಾನಂದ ಮೇಲೆ ಹಲ್ಲೆ ನಡೆಸಲಾಗಿದೆ.
ಟೋಲ್ನಲ್ಲಿ ಕಾರ್ ಬಿಡುವ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಹಿಟ್ನಾಳ್ ಗ್ರಾಮದ ಯುವಕ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಬಂದು ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ. ಅಧಿಕಾರಿ ಚಿದಾನಂದ, ಡ್ರೈವರ್ ಸೇರಿ ಇತರ ಅಧಿಕಾರಿಗಳ ಮೇಲೆ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ಅಧಿಕಾರಿ ಮತ್ತು ಕುಟುಂಬ ವರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುಂಡರ ಪುಂಡಾಟ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಒಟ್ಟು 8 ಜನ ಪುಂಡರ ವಿರುದ್ಧ ಮುನಿರಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್)