

ಉಪ್ಪಿನಂಗಡಿ: ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟಿನಿಂದಾಗಿ ನದಿ ಮೇಲ್ಭಾಗದಲ್ಲಿ ತುಂಬಿರುವ ಹಿನ್ನೀರು ಪರಿಸರದಲ್ಲಿ ಅಂತರ್ಜಲ ವೃದ್ಧಿಸಲು ಕಾರಣವಾಗಿದೆ. ಕೊಳವೆಬಾವಿ, ಕೆರೆ, ಬಾವಿ ನೀರಿನ ಸಂಗ್ರಹದಲ್ಲಿ ವೃದ್ಧಿ ಕಾಣಿಸಿದ್ದು, ಸುತ್ತಮುತ್ತಲ ನಾಗರಿಕರಿಗೆ ಸಂತಸ ಮೂಡಿದೆ.
ಬಿಳಿಯೂರು ಅಣೆಕಟ್ಟಿನಲ್ಲಿ ಪ್ರಸಕ್ತ 4 ಮೀಟರ್ ಎತ್ತರದ ಗೇಟು ಅಳವಡಿಸಲಾಗುತ್ತಿರುವುದರಿಂದ ನದಿಯಲ್ಲಿ 0.2 ಟಿಎಂಸಿ ನೀರು ಸಂಗ್ರಹಣೆಗೊಳ್ಳುವಂತಾಗಿದೆ. ಕುಮಾರಧಾರಾ ನದಿ ಉಪ್ಪಿನಂಗಡಿಯಲ್ಲಿ ನೇತ್ರಾವತಿಯನ್ನು ಸಂಗಮಗೊಂಡು ಹರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಜೀವಂತವಾಗಿದ್ದು, ಅಣೆಕಟ್ಟಿನಿಂದ ಹರಿಯುತ್ತಿದೆ. ಪ್ರಸಕ್ತ ಇದು ಬಹುಗ್ರಾಮ ಕುಡಿಯುವ ಯೋಜನೆಗೆ ಬಳಕೆಯಾಗುತ್ತಿದೆಯಾದರೂ, ತುಂಬೆ ಅಣೆಕಟ್ಟಿಗೆ ಅಗತ್ಯ ಬಿದ್ದರೆ ನೀರು ಒದಗಿಸುವ ಹೆಚ್ಚುವರಿ ಜಲಾಶಯವಾಗಿ ಇಲಾಖೆಯಿಂದ ಪರಿಗಣಿಸಲ್ಪಡುತ್ತಿದೆ.
ಮೀನು ಬೇಟೆ ನಿಷೇಧವಾಗಲಿ: ಉಪ್ಪಿನಂಗಡಿ ಪೇಟೆಯ ತ್ಯಾಜ್ಯ ನೀರೆಲ್ಲ ನೇತ್ರಾವತಿ ನದಿಯ ಹಿನ್ನೀರನ್ನು ಸೇರುತ್ತಿದ್ದು, ನದಿಯ ಪರಿಶುದ್ಧತೆ ಸಂಶಯಿಸುವಂತೆ ಮಾಡಿದೆ. ರೋಗರುಜಿನ ಕಾಣಿಸಿಕೊಂಡಾಗ ನದಿಯ ಹಿನ್ನೀರಿನಲ್ಲಿಯೇ ಸೊಳ್ಳೆ ಉತ್ಪಾದನೆಯಾಗುತ್ತಿದೆ ಎಂಬ ಆರೋಪ ಕೇಳಿಸಿತ್ತು. ನದಿಯಲ್ಲಿ ಮೀನುಗಳಿರುವುದರಿಂದ ಸೊಳ್ಳೆ ಉತ್ಪಾದನೆ ಸಾಧ್ಯವಿಲ್ಲವೆಂದು ಆರೋಗ್ಯಾಧಿಕಾರಿ ಖಚಿತಪಡಿಸಿದ್ದರು. ನದಿಯಲ್ಲಿ ತೆಪ್ಪ, ಬೋಟಿನ ಮೂಲಕ ಮೀನುಗಾರಿಕೆ ಮಾಡುವುದರಿಂದ ಮೀನುಗಳ ಸಂಖ್ಯೆ ಕರಗುತ್ತಿದ್ದು, ನದಿಯ ಪರಿಶುದ್ಧತೆಗೆ ತೊಡಕಾಗಬಹುದಾಗಿದೆ. ಈ ನಿಟ್ಟಿನಲ್ಲಿ ಕೆಲ ಸಮಯದವರೆಗೆ ನದಿಯಲ್ಲಿ ಮೀನುಗಾರಿಕೆ ನಿಷೇಧಿಸಬೇಕೆಂದು ನೆಲ ಜಲ ಸಂರಕ್ಷಣೆ ಮುಂದಾಳು ಕೈಲಾರ್ ರಾಜಗೋಪಾಲ ಭಟ್ ಅಗ್ರಹಿಸಿದ್ದಾರೆ.
ಉದ್ಭವ ಲಿಂಗದ ಪೂಜೆಗೆ ಅವಕಾಶ ಕಲ್ಪಿಸಬಾರದೇ?
ಕಳೆದ ವರ್ಷದಿಂದ ನೇತ್ರಾವತಿ ನದಿಯ ಒಡಲು ಹಿನ್ನೀರಿನಿಂದ ಭರ್ತಿಯಾಗುತ್ತಿರುವುದರಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯ ಉತ್ಸವಾದಿಗಳು ದೇವಾಲಯ ಪರಿಸರಕ್ಕೆ ಸೀಮಿತವಾಗಿದ್ದು, ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.ದೇವಳದ ವರ್ಷಾವಧಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ನದಿಯ ಒಡಲಿನ ಮರಳಿನಲ್ಲಿ ಕುಳಿತು ಜಾತ್ರೆ ಸಂಭ್ರಮ ಸವಿಯುತ್ತಿದ್ದ ನಡೆಗಳಿಗೆ ಅವಕಾಶ ಇಲ್ಲದಂತಾಗಿದೆ. ಈ ಕಾರಣಕ್ಕೆ ಬಿಳಿಯೂರು ಅಣೆಕಟ್ಟಿನಲ್ಲಿ ನವೆಂಬರ್ ತಿಂಗಳಿಂದ ಮಾರ್ಚ್ ತಿಂಗಳವರೆಗೆ 2 ಮೀಟರ್ ಗೇಟು ಅಳವಡಿಸಿ ಮಾರ್ಚ್ ಬಳಿಕ ನಾಲ್ಕು ಮೀಟರ್‌ಗೆ ಎತ್ತರಿಸುವ ಮೂಲಕ ಪರಿಸರದ ಕಾರ್ಯಕ್ರಮಗಳಿಗೆ ನದಿಯ ಒಡಲು ಲಭಿಸುವಂತೆ ಮಾಡಬಹುದೆಂಬ ಸಲಹೆ ವ್ಯಕ್ತವಾಗಿದೆ.
ಗೇಟು ಅಳವಡಿಸದೆ ನೀರು ಸಂಗ್ರಹ
ನೇತ್ರಾವತಿ, ಕುಮಾರಧಾರಾ ನದಿಗಳೆರಡರಲ್ಲೂ ನೀರು ಸಂಗ್ರಹಣೆಗೊಳ್ಳುವುದರಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡಲು ನಿರ್ಮಿಸಲಾದ ನೆಕ್ಕಿಲಾಡಿಯ ಕಿಂಡಿ ಅಣೆಕಟ್ಟಿನಲ್ಲಿ ಗೇಟು ಅಳವಡಿಸದೆ ನೀರು ಸಂಗ್ರಹಗೊಂಡಿದೆ. ಪರಿಸರದ ನಾಲ್ಕು ದಿಕ್ಕುಗಳಲ್ಲಿ ಅಂತರ್ಜಲ ವೃದ್ಧಿಯಾಗಿರುವುದು ಈ ಬಾರಿಯ ಬೇಸಿಗೆಯಲ್ಲಿ ನೀರಿನ ಕೊರತೆ ಕಾಣಿಸದೆಂಬ ವಿಶ್ವಾಸ ಮೂಡಿಸಿದೆ. ಈ ಪರಿಸರದಲ್ಲಿ ಬಿಸಿ ತಾಪಮಾನಕ್ಕೆ ಸಂಗ್ರಹಣೆಗೊಂಡ ನೀರು ವೇಗವಾಗಿ ಆವಿಯಾಗುವ ಸಾಧ್ಯತೆ ಇದ್ದು, ಮುಂಬರುವ ಬೇಸಿಗೆಯಲ್ಲಿ ನೀರಿನ ಕೊರತೆ ಸಂಭವಿಸುವ ಸಾಧ್ಯತೆ ಅಂದಾಜಿಸಲಾಗುತ್ತಿದೆ.