ಅಡಕೆಗೆ ವ್ಯಾಪಕವಾಗುತ್ತಿದೆ ಕೊಳೆ ರೋಗ

ADAKE
Published on

ಸಿದ್ದಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತರ ಆರ್ಥಿಕ ಬೆಳೆಯಾಗಿರುವ ಅಡಕೆಗೆ ಮಾರಕ ಕೊಳೆ ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಅಡಕೆ ಬೆಳೆಗಾರರು ಸಂಕಟ ಎದುರಿಸುವಂತಾಗಿದೆ.

ತಾಲೂಕಿನಲ್ಲಿ 5642.48 ಹೆಕ್ಟೇರ್‌ನಷ್ಟು ಅಡಕೆ ಕ್ಷೇತ್ರ ಇದ್ದು, ಅರಣ್ಯ ಒತ್ತುವರಿಯಲ್ಲಿ ಅಂದಾಜು 1200ರಿಂದ 1300 ಹೆಕ್ಟೇರ್‌ನಷ್ಟು ಅಡಕೆ ಕ್ಷೇತ್ರ ಇದೆ. ಮೂರುವರೆಯಿಂದ ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ರೋಗದಿಂದ ಬೆಳೆ ಹಾನಿ ಸಂಭವಿಸಿದೆ.

ಜೂನ್ ತಿಂಗಳ ಅಂತ್ಯದಿಂದ ಪ್ರಾರಂಭಗೊಂಡ ಮಳೆ ಇಂದಿನವರೆಗೂ ನಿರಂತರವಾಗಿ ಸುರಿಯುತ್ತಿರುವುದರಿಂದ ಹಾಗೂ ಜುಲೈ ತಿಂಗಳಲ್ಲಿ ಬಿದ್ದ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಅಡಕೆ ತೋಟಕ್ಕೆ ಹೊಳೆ-ಹಳ್ಳಗಳ ನೀರು ನುಗ್ಗಿದ ಪರಿಣಾಮ ಮತ್ತು ಕಳೆದ ಹತ್ತನ್ನೆರಡು ದಿನಗಳಿಂದ ಮಳೆ-ಬಿಸಿಲಿನ ಆಟಕ್ಕೆ ಅಡಕೆ ಕೊಳೆರೋಗ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.

ಆಗ್ರಹ: ತಾಲೂಕಿನ ರೈತರ ಆರ್ಥಿಕ ಬೆಳೆಯೇ ಅಡಕೆ ಆಗಿರುವುದರಿಂದ ಅಡಕೆ ಕೊಳೆರೋಗದ ಸಮೀಕ್ಷೆ ನಡೆಸಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಈ ವರ್ಷದ ಮಳೆ-ಗಾಳಿಗೆ ಈಗಾಗಲೇ ಶೇ.50ಕ್ಕೂ ಹೆಚ್ಚು ಅಡಕೆ ಬೆಳೆ ನಾಶವಾಗಿದೆ. ಈ ಕುರಿತು ಶಾಸಕರು, ಸಂಸದರು ಸರ್ಕಾರದ ಮೇಲೆ ಒತ್ತಡ ತರಬೇಕು. ಸರ್ಕಾರ ಅಡಕೆ ಬೆಳೆಗಾರರ ನೆರವಿಗೆ ಬರುವ ಹಾಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.

ತಾಲೂಕಿನಲ್ಲಿ ಅಡಕೆ ಕೊಳೆ ರೋಗ ಕಾಣಿಸಿಕೊಂಡಿದ್ದು, ಈಗಾಗಲೇ ಬೆಳೆಗಾರರಿಗೆ ರೋಗ ನಿಯಂತ್ರಣದ ಮುಂಜಾಗ್ರತೆ ಕುರಿತು ಮಾಹಿತಿ ನೀಡಲಾಗಿದೆ. ಕೊಳೆರೋಗ ಕಾಣಿಸಿಕೊಂಡ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅಡಕೆ ಕೊಳೆ ಹಾನಿಯ ಸಮೀಕ್ಷೆ ಮಾಡುವಂತೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಬಂದರೆ ಸಮೀಕ್ಷೆ ಮಾಡಿ ವರದಿ ನೀಡಲಾಗುವುದು.> ಅರುಣ ಎಚ್.ಜಿ.ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net