

ಬೆಂಗಳೂರು: ಕರೊನಾದಿಂದಾಗಿ ಜನ ಜೀವನ ಏರುಪೇರಾಗಿದೆ. ಈ ಸಮಯದಲ್ಲಿ ಮದುವೆ ನಿಶ್ಚಯಿಸಿಕೊಂಡವರಂತೂ ನೂರು ಬಾರಿ ಯೋಚಿಸಿ ಆಮಂತ್ರಣ ನೀಡುವಂತಾಗಿದೆ. ಮದುವೆಗೆ ಇಷ್ಟೇ ಜನ ಬರಬೇಕೆಂಬ ನಿಯಮವಿರುವದರಿಂದಾಗಿ ಆಡಂಭರವಿಲ್ಲದೆ, ಕೇವಲ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗುವಂತಾಗಿದೆ. ಅದೇ ರೀತಿ ಮದುವೆಯಾದ ವ್ಯಕ್ತಿಯೊಬ್ಬ ತನ್ನ ಮದುವೆಯಲ್ಲಿ ತಾನೇ ಓಲಗದವರೊಂದಿಗೆ ಸೇರಿ ಬ್ಯಾಂಡ್ ಬಾರಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಮದುಮಗ ಕೊರಳಿಗೆ ಬ್ಯಾಂಡ್ ಹಾಕಿಕೊಂಡು ಬಾರಿಸುತ್ತಿದ್ದಾನೆ. ವಧು ಅಲ್ಲೇ ವರನ ಪಕ್ಕದಲ್ಲೇ ನಿಂತು ನೋಡುತ್ತಿದ್ದಾಳೆ. ಇದರ 30 ಸೆಕೆಂಡಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಾರೀ ವೈರಲ್ ಆಗಿದೆ. ಈ ವರನಿಗೆ ಅನೇಕರು ಆತ್ಮನಿರ್ಭರ ವರ ಎಂದು ಕರೆದಿದ್ದರೆ ಇನ್ನು ಕೆಲವರು ಲಾಕ್ಡೌನ್ ಸಮಯದಲ್ಲಿ ಮದುವೆಯಾದರೆ ಹೀಗೇ ಆಗುವುದು ಎಂದು ಕಾಲೆಳೆದಿದ್ದಾರೆ.
ವಿಡಿಯೋದಲ್ಲಿರುವ ಜೋಡಿ ಎಲ್ಲಿಯದು, ಅವರ ಹೆಸರೇನು ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಈ ಸಮಯಕ್ಕೆ ತಕ್ಕಂತ ವಿಡಿಯೋ ಇದಾಗಿರುವುದರಿಂದಾಗಿ ಹೆಚ್ಚಿನ ಜನರು ಆಸಕ್ತಿಯಿಂದ ವಿಡಿಯೋವನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. (ಏಜೆನ್ಸೀಸ್)