ಕನಸಿನ ಯೋಜನೆಗೆ ಗ್ರೀನ್ ಸಿಗ್ನಲ್

mala
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಮಂಗಳೂರಿನಿಂದ ಕಾರ್ಕಳ ಮಾಳ ಮಾರ್ಗವಾಗಿ ಸೋಲಾಪುರ ಸಂಪರ್ಕಿಸುವ ರಾ.ಹೆ 169 ಮಾಳ ಘಾಟ್‌ನಿಂದ ತನಿಕೋಡು ಗೇಟ್‌ವರೆಗೆ ರಸ್ತೆ ಅಗಲಗೊಳಿಸುವಿಕೆಯ ಬೇಡಿಕೆ ಹಲವು ವರ್ಷದಿಂದ ಕೇಳಿಬರುತ್ತಿದ್ದು, ಇದೀಗ ಅಗಲ ಮಾಡುವ ಪ್ರಸ್ತಾಪ ಅಂತಿಮ ಹಂತಕ್ಕೆ ಬಂದಿದೆ.

ಮಲೆನಾಡು ಪ್ರದೇಶ, ಶೃಂಗೇರಿ ಶಾರದಾಂಬೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರ ಸಂಪರ್ಕಿಸಲು ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ವಾಹನ ಓಡಾಟವೂ ಹೆಚ್ಚಿರುವುದರಿಂದ ಮಾಳ ಘಾಟ್ ರಸ್ತೆ ಕಿರಿದಾಗಿ ಸಮಸ್ಯೆ ಸೃಷ್ಟಿಸುತ್ತಿತ್ತು. ಈಗಾಗಲೇ ಹಲವು ಅಪಘಾತ, ಸಾವು ನೋವಿಗೆ ರಸ್ತೆ ಕಾರಣವಾಗಿದ್ದು, ಪ್ರವಾಸಿಗರು ಹಾಗೂ ವಾಹನ ಸವಾರರ ರಸ್ತೆ ಅಗಲೀಕರಣದ ಹಲವು ವರ್ಷಗಳ ಬೇಡಿಕೆ ಈಡೇರುವ ಕಾಲ ಬಂದತ್ತಿದೆ. ಸುಮಾರು 520 ಕೋಟಿ ರೂ. ಡಿಪಿಅರ್ ಅಂತಿಮವಾಗಿದ್ದು, ಅರಣ್ಯ ವನ್ಯಜೀವಿ ಮಂಡಳಿ ಅನುಮೋದನೆ ಒಪ್ಪಿಗೆಗೆ ಬಾಕಿ ಉಳಿದಿದೆ.

ಸ್ಥಳ ಗುರುತಿಗೆ ಮನವಿ

ವನ್ಯಜೀವಿ ಮಂಡಳಿ ಪ್ರಕಾರ 25 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ 50 ಹೆಕ್ಟೇರ್ ಕಂದಾಯ ಭೂಮಿ ಗುರುತಿಸಿ ಅರಣ್ಯೀಕರಣಗೊಳಿಸಬೇಕೆಂಬ ನಿಯಮವಿದೆ. ಅದಕ್ಕಾಗಿ ಸುಮಾರು 120 ಎಕರೆ ವಿಶಾಲ ಭೂಮಿ ಲಭ್ಯವಾಗಬೇಕು. ಶೃಂಗೇರಿ ತಾಲೂಕಿನಲ್ಲಿ 50 ಹೆಕ್ಟೇರ್ ಜಮೀನು ಗುರುತಿಸಿದ್ದು, ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಬರುವ ಕಾರಣ ಪ್ರಸ್ತಾಪ ತಿರಸ್ಕರಿಸಲಾಗಿತ್ತು. ಬಳಿಕ ಉಡುಪಿ ಜಿಲ್ಲೆ ಬ್ರಹ್ಮಾವರ ಬಳಿ 80 ಎಕರೆ ಜಮೀನು ಸರ್ವೇ ಕಾರ್ಯ ನಡೆದಿದ್ದು, ಕಡಿದಾದ ಜಮೀನು ಲಭ್ಯವಾಗಿದೆ. ಇಲ್ಲಿ ಮರ ನೆಡಲು ಸೂಕ್ತ ಪ್ರದೇಶವೆಂದು ಅಧ್ಯಯನ ನಡೆಸಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ. ಈಗಾಗಲೇ ಹೆಚ್ಚುವರಿ ಜಮೀನು ಒದಗಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಗುರುತಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಮನವಿ ಸಲ್ಲಿಸಲಾಗಿದೆ.

ರಸ್ತೆ ಅಭಿವೃದ್ಧಿಯಲ್ಲಿ ಏನಿದೆ?

ಮಾಳ ಘಾಟ್‌ನಿಂದ ತನಿಕೋಡು ಚೆಕ್‌ಪೋಸ್ಟ್‌ವರೆಗೆ ಒಟ್ಟು 29 ಕಿ.ಮೀ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು, ಒಟ್ಟು 7 ಕಡೆಗಳಲ್ಲಿ ಸೇತುವೆ ನಿರ್ಮಾಣವಾಗಲಿದ್ದು, ಪ್ರಸ್ತಾವಿತ ಹೆದ್ದಾರಿ ಈಗಿರುವ ರಸ್ತೆಯಲ್ಲಿಯೇ ಹಾದುಹೋಗಲಿದೆ. ಹೆದ್ದಾರಿ ಒಟ್ಟು 11 ಮೀಟರ್ ಅಗಲೀಕರಣವಾಗಲಿದೆ. ಮಾಳ ಘಾಟ್ ಅಬ್ಬಾಸ್ ಕಟ್ಟಿಂಗ್‌ನಲ್ಲಿ ಬಂಡೆ ಒಡೆದು 12 ಮೀಟರ್ ಅಗಲೀಕರಣ ನಡೆಯಲಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ ತನಿಕೋಡುವರೆಗೆ ವನ್ಯಜೀವಿ ಭಾಗದಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಲಿದೆ. ಕಾರ್ಕಳದ ಮಾಳ ಗೇಟಿನಿಂದ ಮಂಗಳೂರಿನ ಕುಡುಪುವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಮಾಳ ಘಾಟ್ ರಸ್ತೆಗೆ ಸುರಂಗ ಮಾರ್ಗ ನಿರ್ಣಯ ಪ್ರಸ್ತಾಪವಾಗಿಲ್ಲ ಎನ್ನಲಾಗಿದೆ.

ನೀರಿನ ಸೆಲೆ ದಿಕ್ಕು ಬದಲು

ರಸ್ತೆ ಅಭಿವೃದ್ಧಿ ಅಗತ್ಯ ಒಂದೆಡೆಯಾದರೇ ರಸ್ತೆ ಬದಿಯ ಲಕ್ಷಾಂತರ ಮರಗಳು ಧರೆಗೆ ಉರುಳುವ ಸಾಧ್ಯತೆಗಳಿವೆ. ಕುದುರೆಮುಖ ವನ್ಯಜೀವಿ ವಿಭಾಗದ ತುಂಗೆ ನದಿ ಹರಿದು ಸಾಗುವ ದಟ್ಟ ಕಾನನದ ನಡುವೆ ಸುಮಾರು 25 ಹೆಕ್ಟೇರ್ ಅರಣ್ಯ ರಸ್ತೆ ಅಭಿವೃದ್ಧಿಗೆ ನಾಶವಾಗಲಿದೆ. ರಾ.ಹೆದ್ದಾರಿ ಪ್ರಾಧಿಕಾರ ಈಗಾಗಲೇ ಪ್ರಸ್ತಾವಿತ ರಾ.ಹೆ. ಮಾಳ ಘಾಟ್‌ನಿಂದ ತನಿಕೋಡು ಗೇಟ್‌ವರೆಗೆ ಒಟ್ಟು 11 ತಿರುವು ಅಗಲೀಕರಣಗೊಳ್ಳಲಿದೆ. ಸೂಕ್ಷ್ಮ ಜೀವ ವೈವಿಧ್ಯ ಹೊಂದಿರುವ ನಿತ್ಯ ಹರಿದ್ವರ್ಣ ಕಾಡು ಈ ಭಾಗದಲ್ಲಿದ್ದು, ತುಂಗಾ ನದಿಯ 7ಕ್ಕೂ ಹೆಚ್ಚು ಉಪನದಿಗಳು ಈ ರಸ್ತೆ ಸುತ್ತಲಿನ ಗುಡ್ಡಗಳ ಭಾಗದಲ್ಲಿಯೆ ಹುಟ್ಟುವ ಕಾರಣ ರಸ್ತೆ ಅಗಲೀಕರಣ ಸಂದರ್ಭದಲ್ಲಿ ನೀರಿನ ಸೆಲೆಗಳು ದಿಕ್ಕು ಬದಲಿಸುವ ಸಾಧ್ಯತೆ ಹೆಚ್ಚಾಗಲಿದೆ. ಈ ಕಾಡಿನಲ್ಲಿ ಬಲು ಅಪೂರ್ವ ಪಾರಂಪರಿಕ ಮರಗಳಿದ್ದು ಜತೆಗೆ, ಪ್ರಾಣಿಗಳ ವಾಸ ಸ್ಥಾನ.

ಅಂದಾಜು 120 ಎಕರೆ ಕಂದಾಯ ಜಮೀನು ವನ್ಯಜೀವಿ ವಿಭಾಗಕ್ಕೆ ನೀಡಬೇಕಾಗಿದೆ. ಗಿಡ ಬೆಳೆಸುವುದಕ್ಕಾಗಿ ಈಗಾಗಲೇ ಉಡುಪಿ ಬ್ರಹ್ಮಾವರ ಬಳಿ 80 ಎಕರೆ ಜಾಗ ಗುರುತಿಸಲಾಗಿದೆ. ಇಲ್ಲಿ ಗಿಡ ನೆಡಲು ಸೂಕ್ತ ಪ್ರದೇಶವೆಂದು ಅರಣ್ಯ ಇಲಾಖೆ ಅಧ್ಯಯನ ನಡೆಸಿ ಮಾಹಿತಿ ನೀಡಲಿದೆ. ಹೆಚ್ಚುವರಿ ಜಾಗ ಒದಗಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಒಂದೇ ಕಡೆಯಲ್ಲಿ ಸುಮಾರು 50 ಹೆಕ್ಟೇರ್ ಭೂಮಿ ಸಿಕ್ಕರೆ ಉತ್ತಮ. ಮಂಜುನಾಥ್ ಎಂ.ವಿ -ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿಯಂತ https://www.vijayavani.net/preeti-salian-receives-doctorate https://www.vijayavani.net/nutrition-campaign-nutritious-food-camp

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net