ಶಾಸಕ ಯತ್ನಾಳ್​ ಟ್ವೀಟ್​ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು; ಹಸಿರು ಬಾವುಟ ತೆಗೆಸಿ ರಾಷ್ಟ್ರಧ್ವಜ ಹಾರಿಸಿದ ಖಾಕಿ

National Flag
Published on

ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದ ಹನುಮ ಧ್ವಜ ಹಾಗೂ ರಾಷ್ಟ್ರ ಧ್ವಜ ತೆರವು ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಇದರ ಬೆನ್ನಲ್ಲೇ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್​ನಲ್ಲಿ ಹಾರಿಸಲಾದ ಹಸಿರು ಬಾವುಟ ಮತ್ತೊಂದು ಸುತ್ತಿನ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಇತ್ತ ಶಿವಾಜಿನಗರದ ಚಾಂದಿನ ಚೌಕ್​ನಲ್ಲಿ ಹಸಿರು ಬಾವುಟ ಹಾರಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ಈ ಕುರಿತು ಟ್ವೀಟ್​ ಮಾಡಿದ್ದ ಬಿಜೆಪಿ ನಾಯಕರು ತೆಗೆಸುವ ತಾಕತ್ ನಿಮಗೆ ಇಲ್ಲವಾ ಪೊಲೀಸರಿಗೆ ಸವಾಲ್​ ಎಸೆದಿದ್ದರು. ಇತ್ತ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹರಿಸು ಧ್ವಜವನ್ನು ತೆರವು ಮಾಡಿರುವ ಪೊಲೀಸರು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಬಿಜೆಪಿ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​, ಶಿವಾಜಿನಗರದ ಜನನಿಬಿಡ ಪ್ರದೇಶದಲ್ಲಿ ಹಾರಿಸಿದ್ದ ಹಸಿರು ಬಣ್ಣದ ಧ್ವಜದ ಬಗ್ಗೆ ನಾನು ಟ್ವೀಟ್ ಮಾಡಿದ ಬೆನ್ನಲ್ಲೇ, ಶಿವಾಜಿನಗರದ ಪೊಲೀಸರು, ಹಾಗೂ ಬೆಂಗಳೂರು ನಗರದ ಆಯುಕ್ತರು , ಕೂಡಲೇ ಅದನ್ನು ತೆಗೆಸಿ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡಕ್ಕೆ ನನ್ನ ಕೃತಜ್ಞಾಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ

ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ಹಾರಾಡುತ್ತಿರುವುದನ್ನು ರಾಮಚಂದ್ರ ಯರಗಲ್​ ಎಂಬುವವರು ಟ್ವೀಟ್‌ ಮಾಡಿದ್ದರು. ಈ ಬಾವುಟ ಯಾವ ಧರ್ಮದ್ದು ಎಂದು ‘ಕೈ’ ನಾಯಕರು ಉತ್ತರಿಸಬೇಕು. ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ ಎಂದು ಬರೆದುಕೊಂಡಿದ್ದರು.

ಇದರ ಬೆನ್ನಲ್ಲೇ ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಸಹ ಟ್ವೀಟ್ ಮಾಡಿ, ಪೂರ್ವ ವಿಭಾಗ ಡಿಸಿಪಿಯವರೇ ಈ ರೀತಿ ಶತ್ರು ದೇಶದ ಬಣ್ಣವನ್ನು ಹೋಲುವ ಹಸಿರು ಧ್ವಜವನ್ನು ಸಾರ್ವಜನಿಕ ಪ್ರದೇಶದಲ್ಲಿ ಹಾರಿಸುವುದು ನಮ್ಮ ಧ್ವಜ ನೀತಿಗೆ ವಿರುದ್ದವಾದದ್ದಲ್ಲವೇ ಈ ಕೂಡಲೇ, ಇದನ್ನು ತೆಗೆದು ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ. ಶಿವಾಜಿನಗರ ಇರುವುದು ಭಾರತದಲ್ಲಿ, ಪಾಕಿಸ್ತಾನದಲ್ಲಲ್ಲ ಬರೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net