

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಸ್ವಾವಲಂಬಿಗಳನ್ನಾಗಿ ಮಾಡುವುದು ಮಾತ್ರವಲ್ಲದೆ ಶೈಕ್ಷಣಿಕವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕಳೆದ ಸಾಲಿನಲ್ಲಿ ಒಂದು ಸಾವಿರ ಅತಿಥಿ ಶಿಕ್ಷಕರನ್ನು ಶಿಕ್ಷಕರ ಕೊರತೆ ಇರುವ ಬೇರೆ ಬೇರೆ ಸರ್ಕಾರಿ ಶಾಲೆಗಳಿಗೆ ನೀಡಿದೆ. ಶಾಲಾ ಕಟ್ಟಡ ದುರಸ್ಥಿ, ಬೆಂಚು ಡೆಸ್ಕ್ ಮಾಡಲು, ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ಕಾರ್ಯಕ್ರಮಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮೂಲಕ ಅನುದಾನ ನೀಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ತಾಲೂಕು ಯೋಜನಾಧಿಕಾರಿ ಸಂಜಯ ನಾಯ್ಕ ಹೇಳಿದರು.
ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿ.ಪ್ರಾ. ಶಾಲೆಯ ಸಭಾಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 1.5 ಲಕ್ಷ ಅನುದಾನದ ಮಂಜೂರಾತಿ ಪತ್ರವನ್ನು ಶುಕ್ರವಾರ ಹಸ್ತಾಂತರಿಸಿ ಅವರು ಮಾತನಾಡಿದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರವಿಶಂಕರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ಸದಸ್ಯ ಬಿ.ರಾಘವೇಂದ್ರ ಪೈ, ಭಜನಾ ಪರಿಷತ್ ಸಂಯೋಜಕ ಕೃಷ್ಣ ಪೂಜಾರಿ, ಕೇಂದ್ರ ಸಮಿತಿ ನಿಕಟಪೂರ್ವ ಅಧ್ಯಕ್ಷ ನಾರಾಯಣ ಕೆ.ಗುಜ್ಜಾಡಿ, ವಲಯ ಮೇಲ್ವಿಚಾರಕ ಚಂದ್ರ ಮರಾಠಿ, ಶೌರ್ಯ ವಿಪತ್ತು ಘಟಕದ ಮಡಿ ನಾಗರಾಜ ಖಾರ್ವಿ, ಒಕ್ಕೂಟದ ಅಧ್ಯಕ್ಷರು, ಸೇವಾ ಪ್ರತಿನಿಧಿಗಳು, ಶಾಲೆಯ ಶಿಕ್ಷಕರು, ಶೌರ್ಯ ವಿಪತ್ತು ಘಟಕದ ಸದಸ್ಯರು, ಎಸ್ಡಿಎಂಸಿ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಉಷಾಕುಮಾರಿ ಸ್ವಾಗತಿಸಿದರು. ಸಹಶಿಕ್ಷಕಿಯರಾದ ಅನುಷಾ ಸಿ.ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಶಾಂತಿ ವಂದಿಸಿದರು.