ಚೆಸ್​ ವಿಶ್ವಕಪ್​ ರನ್ನರ್​ಅಪ್​ ಪ್ರಜ್ಞಾನಂದ ಗಳಿಸಿದ ಬಹುಮಾನ ಮೊತ್ತವೆಷ್ಟು ಗೊತ್ತೇ?

chess web2
Published on

ಬಾಕು (ಅಜರ್​ಬೈಜಾನ್​): ಭಾರತದ ಯುವ ಚದುರಂಗ ಪ್ರತಿಭೆ ಆರ್​. ಪ್ರಜ್ಞಾನಂದ ಅಮೋಘ ನಿರ್ವಹಣೆಯ ನಡುವೆ ಫಿಡೆ ಚೆಸ್​ ವಿಶ್ವಕಪ್​ನಲ್ಲಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟರು. ವಿಶ್ವ ನಂ. 1 ಮ್ಯಾಗ್ನಸ್​ ಕಾರ್ಲ್​ಸೆನ್​ ವಿರುದ್ಧದ ಪ್ರಶಸ್ತಿ ಸುತ್ತಿನ ಹೋರಾಟದ ಟೈ ಬ್ರೇಕರ್​ನಲ್ಲಿ ಎಡವಿದ ಪ್ರಜ್ಞಾನಂದ 0.5-1.5ರಿಂದ ಮಣಿದರು. ಚೊಚ್ಚಲ ಚೆಸ್​ ವಿಶ್ವಕಪ್​ ಗೆದ್ದ ಕಾರ್ಲ್​ಸೆನ್​ 91.44 ಲಕ್ಷ ರೂ. ಬಹುಮಾನ ಪಡೆದರೆ, ರನ್ನರ್​ಅಪ್​ ಪ್ರಜ್ಞಾನಂದ 66.5 ಲಕ್ಷ ರೂ. ಬಹುಮಾನ ಗಳಿಸಿದರು.

ಮಂಗಳವಾರ ಮತ್ತು ಬುಧವಾರ ನಡೆದ ಮೊದಲೆರಡು ಕ್ಲಾಸಿಕಲ್​ ಚೆಸ್​ ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದರಿಂದ ಪ್ರಜ್ಞಾನಂದ ಮತ್ತು ನಾರ್ವೆಯ ತಾರೆ ಕಾರ್ಲ್​ಸೆನ್​ 1&1ರಿಂದ ಸಮಬಲ ಸಾಧಿಸಿದ್ದರು. ವಿಜೇತರ ನಿರ್ಧಾರಕ್ಕಾಗಿ ಗುರುವಾರ ನಡೆದ ಟೈಬ್ರೇಕರ್​ ಹಂತದ ಮೊದಲ ಸುತ್ತಿನಲ್ಲಿ 25 ನಿಮಿಷಗಳ (+10ಸೆಕೆಂಡ್​) ಎರಡು ರ್ಯಾಪಿಡ್​ ಚೆಸ್​ ಪಂದ್ಯಗಳು ನಡೆದವು. ಈ ಪೈಕಿ ಮೊದಲ ಪಂದ್ಯದಲ್ಲಿ ಕಾರ್ಲ್​ಸೆನ್​ ಗೆದ್ದರೆ, ಪ್ರಜ್ಞಾನಂದ ಗೆಲ್ಲಲೇಬೇಕಾಗಿದ್ದ 2ನೇ ಪಂದ್ಯದಲ್ಲಿ ಡ್ರಾ ಸಾಧಿಸಲಷ್ಟೇ ಶಕ್ತರಾದರು. ಇದರಿಂದ 5 ಬಾರಿಯ ವಿಶ್ವ ಚಾಂಪಿಯನ್​ ಕಾರ್ಲ್​ಸೆನ್​ ಚೊಚ್ಚಲ ಚೆಸ್​ ವಿಶ್ವಕಪ್​ ಪ್ರಶಸ್ತಿಗೆ ಮುತ್ತಿಟ್ಟರು.

ಟೈಬ್ರೇಕರ್​ ಹಂತದ ಮೊದಲ ಪಂದ್ಯ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. ಬಿಳಿ ಕಾಯಿಯೊಂದಿಗೆ ಆಡಿದ ಪ್ರಜ್ಞಾನಂದ ಅವರಿಂದ ದಿಟ್ಟ ಸವಾಲು ಎದುರಿಸಿದ ಕಾರ್ಲ್​ಸೆನ್​ ಕೊನೆಗೂ 45ನೇ ನಡೆಯಲ್ಲಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು. ಬಳಿಕ 2ನೇ ಪಂದ್ಯದಲ್ಲಿ ಬಿಳಿ ಕಾಯಿಯೊಂದಿಗೆ ಆಡಿದ 32 ವರ್ಷದ ಕಾರ್ಲ್​ಸೆನ್​, ಅದರ ಪೂರ್ಣ ಲಾಭವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಪ್ರಶಸ್ತಿ ಆಸೆ ಜೀವಂತ ಉಳಿಸಿಕೊಳ್ಳಲು ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಕಾರ್ಲ್​ಸೆನ್​ ಪ್ರಾಬಲ್ಯದೆದುರು ಮಂಕಾದ ಪ್ರಜ್ಞಾನಂದ, ಕೇವಲ 22 ನಡೆಗಳ ಬಳಿಕ ಡ್ರಾಕ್ಕೆ ಸಮ್ಮತಿಸಿದರು. ಇದರಿಂದ ಬ್ಲಿಟ್ಜ್​ ಪಂದ್ಯದ ಅಗತ್ಯವಿಲ್ಲದೆ, ಲಿತಾಂಶ ಹೊರಹೊಮ್ಮಿತು. ಚೆನ್ನೈ ಆಟಗಾರ ಪ್ರಜ್ಞಾನಂದ ಫೈನಲ್​ ಹಾದಿಯಲ್ಲಿ ವಿಶ್ವ ನಂ. 2 ಹಿಕರು ನಕಮುರಾ ಮತ್ತು ವಿಶ್ವ ನಂ. 3 ಫ್ಯಾಬಿಯಾನೊ ಕರುವಾನಾಗೆ ಸೋಲುಣಿಸಿ ಗಮನಸೆಳೆದಿದ್ದರು. ಟೂರ್ನಿಯ 3ನೇ ಸ್ಥಾನಕ್ಕಾಗಿ ನಡೆದ ಕಾದಾಟದಲ್ಲಿ ಅಮೆರಿಕದ ಕರುವಾನಾ ಸ್ಥಳಿಯ ಆಟಗಾರ ನಿಜತ್​ ಅಬಸೋವ್​ಗೆ ಸೋಲುಣಿಸಿದರು.

ಇನ್ನು ವಿಶ್ವ ಚಾಂಪಿಯನ್​ಗೆ ಸವಾಲೊಡ್ಡುವ ಅವಕಾಶ

ವಿಶ್ವಕಪ್​ ಪ್ರಶಸ್ತಿ ಕೈತಪ್ಪಿದ ನಡುವೆ ಪ್ರಜ್ಞಾನಂದ, ಹಾಲಿ ವಿಶ್ವ ಚಾಂಪಿಯನ್​ ಚೀನಾದ ಡಿಂಗ್​ ಲಿರೆನ್​ಗೆ ಸವಾಲೊಡ್ಡುವ ಅವಕಾಶವನ್ನು ಪಡೆದಿದ್ದಾರೆ. ಇದಕ್ಕಾಗಿ ಅವರು ಮುಂದಿನ ವರ್ಷ ಕೆನಡದಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್​ ಚೆಸ್​ ಟೂರ್ನಿಯಲ್ಲಿ ಗೆಲ್ಲಬೇಕಾಗಿದೆ. 2024ರ ಏಪ್ರಿಲ್​ 2ರಿಂದ 25ರವರೆಗೆ ಟೊರಾಂಟೊದಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್​ ಟೂರ್ನಿಯಲ್ಲಿ 8 ಆಟಗಾರರ ಆಡಲಿದ್ದಾರೆ. ಇದರಲ್ಲಿ ಗೆದ್ದವರು ಬಳಿಕ ಲಿರೆನ್​ ಎದುರು ವಿಶ್ವ ಚಾಂಪಿಯನ್​ ಪಟ್ಟಕ್ಕಾಗಿ ಹೋರಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net