ಹಾನಗಲ್ಲ ದ್ಯಾಮವ್ವ ದೇವಿ ಜಾತ್ರೆಗೆ ಭರ್ಜರಿ ಸಿದ್ಧತೆ: ಕಂಗೊಳಿಸಲಿದೆ ಭವ್ಯ ಮಂಟಪ

Dyamavva Devi Jatre in Hanagal
Published on

ಹಾನಗಲ್ಲ: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪ್ರಸಿದ್ಧ ಗ್ರಾಮದೇವಿ(ದ್ಯಾಮವ್ವನ) ಜಾತ್ರೆ ಮಾ. 18ರಿಂದ ಆರಂಭಗೊಳ್ಳಲಿದ್ದು, ಜಾತ್ರಾ ಸಮಿತಿ ಭವ್ಯ ಮಂಟಪವನ್ನು ನಿರ್ಮಿಸಿ ದೇವಿ ಪ್ರತಿಷ್ಠಾಪನೆಗೆ ಸಿದ್ಧವಾಗುತ್ತಿದೆ.

ಮೂರು ದಶಕಗಳಿಂದ ನಡೆದು ಬಂದಿರುವ ಜಾತ್ರೆಯಲ್ಲಿ ರಾಜ್ಯದ ಮೂಲೆ-ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಸಂಭ್ರಮಿಸುತ್ತಾರೆ. ಶಿರಸಿ ಮಾರಿಕಾಂಬಾ ಜಾತ್ರೆಯ ಮಾದರಿಯಲ್ಲಿ ಧಾರ್ಮಿಕ ಪದ್ಧತಿಗಳು ನಡೆಯಲಿದ್ದು, ಈಗಾಗಲೇ ವಿವಿಧ ಆಟಗಳ ಅಮ್ಯೂಸ್‌ಮೆಂಟ್, ಬೃಹತ್ ಸೆಟ್‌ಗಳು ಜಾತ್ರೆಯ ಮೆರುಗನ್ನು ಹೆಚ್ಚಿಸುತ್ತಿವೆ. ಜಾತ್ರೆಯನ್ನು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಡೆಯಲು ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಜಾತ್ರೆ ನಡೆಯುವ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಯಾವುದೇ ಅಹಿತಕರ ಘಟನೆ, ಸಮಸ್ಯೆಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ಸಂಪೂರ್ಣ ನಿಗಾವಹಿಸಿದೆ.

ಹಾನಗಲ್ಲು ಹಲವು ದಶಕಗಳ ಹಿಂದೆ ಹಳೇಕೋಟಿ ಎಂಬ ಹೆಸರು ಪಡೆದಿತ್ತು. ಇಂದಿಗೂ ಕಂದಾಯ ಇಲಾಖೆ ದಾಖಲೆಗಳಲ್ಲಿ ಇದೇ ಮುಂದುವರಿದಿದೆ. ಆಗ ಮಾರಕ ರೋಗವೊಂದು ಗ್ರಾಮವನ್ನು ಕಾಡಿದಾಗ ಅಲ್ಲಿಂದ ಎಲ್ಲ ಜನರೂ ಪಕ್ಕದ ಹಾನಗಲ್ಲ ಪ್ರದೇಶಕ್ಕೆ ವಲಸೆ ಬಂದು ವಾಸಿಸಲಾರಂಭಿಸಿದರು. ಹಳೇಕೋಟಿಯಲ್ಲಿದ್ದ ದ್ಯಾಮವ್ವ ದೇವಿಯನ್ನೂ ತಮ್ಮೊಂದಿಗೆ ತಂದು ಇಲ್ಲಿಯೇ ಪ್ರತಿಷ್ಠಾಪಿಸಿದರು. ಜಾತ್ರೆಗಳನ್ನೂ ಆರಂಭಿಸಿದ್ದರು. ನಂತರದ ದಿನಗಳಲ್ಲಿ ಜಾತ್ರೆ ನಿಂತು ಹೋಗಿತ್ತು. ಅದನ್ನು 80ರ ದಶಕದಲ್ಲಿ ಮತ್ತೆ ಪುನರಾರಂಭಿಸಲಾಯಿತು. ಈ ಬಾರಿ 10ನೇ ಜಾತ್ರೆಯಾಗಿ ಪ್ರಸ್ತುತ ವರ್ಷದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಶಿರಸಿ ಮಾರಿಕಾಂಬೆಯ ಸಹೋದರಿ ಎಂದು ಪ್ರತೀತಿ ಹೊಂದಿರುವ ಹಾನಗಲ್ಲ ದ್ಯಾಮವ್ವಳನ್ನು ಕಳ್ಳರು ಕದ್ದೊಯ್ದು ಆಭರಣಗಳನ್ನು ತೆಗೆದುಕೊಂಡು ಶಿರಸಿಯ ಕೆರೆಯೊಂದರಲ್ಲಿ ಬಿಸಾಡಿದ್ದರು. ನಂತರ ಹಾನಗಲ್ಲ ಭಕ್ತರು ಮಾರಿಕಾಂಬೆಯಲ್ಲಿಗೆ ತೆರಳಿ ಪ್ರಾರ್ಥಿಸಿ ಮತ್ತೊಂದು ವಿಗ್ರಹ ತಯಾರಿಸಿ ದ್ಯಾಮವ್ವನನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ದೇವಿಯ ಉತ್ಸವ ದಿನದಿಂದ-ದಿನಕ್ಕೆ ಇಮ್ಮಡಿಸಿತು. ತಾಲೂಕಿನ ಹಸನಾಬಾದಿ ಗ್ರಾಮ ದ್ಯಾಮವ್ವನ ತವರೂರೆಂಬ ಪ್ರತೀತಿಯಿದೆ.

ಮಾಜಿ ಸಚಿವ ದಿ.ಸಿ.ಎಂ. ಉದಾಸಿ, ಮಾಜಿ ಸಂಸದ ಶಿವಕುಮಾರ ಉದಾಸಿ ಅವರ ನೇತೃತ್ವದಲ್ಲಿ ಈ ಹಿಂದಿನ ಜಾತ್ರೆಗಳು ನಡೆದುಬಂದವು. ಈ ಬಾರಿ ನೂತನ ಜಾತ್ರಾ ಟ್ರಸ್ಟ್ ರಚನೆಗೊಂಡಿದ್ದು, ಹೊಸತನ ಹುಟ್ಟುಹಾಕಿದೆ. ಮಾ. 18ರಂದು ರಾತ್ರಿಯಿಡಿ ದೇವಿಯ ರಥೋತ್ಸವ ಜರುಗಲಿದ್ದು, 19ರಂದು ಬೆಳಗ್ಗೆ ದೇವಿಯು ಪಾದಗಟ್ಟಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ.

ಝಾಂಜ್, ಟಾಶಾರಾಮ ಡೋಲ್, ಚಂಡೆ ವಾದ್ಯ, ಡೊಳ್ಳು ಕುಣಿತ, ವೀರಗಾಸೆ, ಮಂಗಳವಾದ್ಯ, ರೋಡ್ ಆರ್ಕೆಸ್ಟ್ರಾ, ನವಿಲು, ಮಾರುತಿಯ ಬೃಹತ್ ಗೊಂಬೆಗಳು, ನಾಶಿಕ್ ಡೋಲ್, ಬೇಡರ ವೇಷ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಳ್ಳಲಿವೆ. ರಥೋತ್ಸವದ ತೇರನ್ನು ಬಣ್ಣ-ಬಣ್ಣದ ಧ್ವಜಗಳಿಂದ ಶೃಂಗರಿಸಲಾಗುತ್ತಿದೆ. ಅರಮನೆ ಮಾದರಿಯಲ್ಲಿ ದೇವಿಯ ಮಂಟಪವನ್ನು ನಿರ್ಮಿಸಲಾಗಿದ್ದು, ಭಕ್ತರ ಮನಸೂರೆಗೊಳ್ಳಲಿದೆ. ಜಾತ್ರೆಗಾಗಿ ಪಟ್ಟಣವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಪ್ರಮುಖ ಬೀದಿಗಳನ್ನು ಸುಂದರವಾಗಿ ಅಲಂಕರಿಸಲಾಗಿದ್ದು, ಸಂಪೂರ್ಣ ಕೇಸರಿಮಯವಾಗಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ರಥೋತ್ಸವಕ್ಕೆ ಚಾಲನೆ ಮಾ. 18ರಂದು ರಾತ್ರಿ 8 ಗಂಟೆಗೆ ಶಾಸಕ ಶ್ರೀನಿವಾಸ ಮಾನೆ ರಥೋತ್ಸವಕ್ಕೆ ಚಾಲನೆ ನೀಡಲಿದ್ದು, ಜಾತ್ರಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ವಿಶ್ವನಾಥ ಹಿರೇಮಠ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಎಸ್‌ಪಿ ಅಂಶುಕುಮಾರ, ತಹಸೀಲ್ದಾರ್ ಎಸ್. ರೇಣುಕಾ, ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ ಇತರರು ಪಾಲ್ಗೊಳ್ಳಲಿದ್ದಾರೆ.

ಹಾನಗಲ್ಲಿನ ಐತಿಹಾಸಿಕ ಗ್ರಾಮದೇವಿ ಜಾತ್ರೆ ಮಾ. 18ರಂದು ವಿಜೃಂಭಣೆಯಿಂದ ಆರಂಭಗೊಳ್ಳುತ್ತಿದೆ. ಜಾತ್ರೆಗೆ ರಾಜ್ಯದ ಮೂಲೆ-ಮೂಲೆಗಳಿಂದ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಅವರೆಲ್ಲರ ಆತಿಥ್ಯ ವ್ಯವಸ್ಥೆಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ಹಾಗೂ ಸಂಘ-ಸಂಸ್ಥೆಗಳ ನೆರವಿನಿಂದ ವ್ಯವಸ್ಥೆ ಗೊಳಿಸಲಾಗುತ್ತಿದೆ. ನಾವೆಲ್ಲರೂ ಈ ಜಾತ್ರೆಯ ಯಶಸ್ಸಿಗೆ ಕೈ ಜೋಡಿಸುತ್ತಿದ್ದೇವೆ. ನಾವೆಲ್ಲರೂ ಸ್ವಚ್ಛತೆ, ಭದ್ರತೆ ಸೇರಿದಂತೆ ಎಲ್ಲ ವಿಷಯಗಳಲ್ಲಿ ಕಾಳಜಿ ವಹಿಸೋಣ. *ಸಿದ್ದಲಿಂಗಪ್ಪ ಕಮಡೊಳ್ಳಿ, ಉದ್ಯಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net