ಇಸ್ಕಾನ್ ದೇವಾಲಯದಲ್ಲಿ ಶ್ರೀಕೃಷ್ಣ-ಬಲರಾಮರ ಅದ್ಧೂರಿ ರಥೋತ್ಸವ

iskon
Published on

ಬೆಂಗಳೂರು: ಇಸ್ಕಾನ್ ಸಂಸ್ಥೆ ಭಾರತದ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಸಾಂಸ್ಕೃತಿಕ ರಾಯಬಾರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇಸ್ಕಾನ್ ದೇವಾಲಯದಲ್ಲಿ ಆಯೋಜಿಸಲಾಗಿದ್ದ 40ನೇ ವಾರ್ಷಿಕ ಶ್ರೀಕೃಷ್ಣ ಬಲರಾಮ ರಥಯಾತ್ರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ದೇಶ ವಿದೇಶಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರವಾಸಿಗರು ಕಡ್ಡಾಯವಾಗಿ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿಗೆ ಬಂದಾಗ ಒಂದು ರೀತಿಯ ಭಕ್ತಿಯುತ ಉತ್ಸಾಹ ದೊರೆಯುತ್ತದೆ. ವೈಯಕ್ತಿಕವಾಗಿ ಬಾಲ್ಯದಿಂದಲೂ ನನಗೆ ಇಸ್ಕಾನ್ ಒಡನಾಟವಿದ್ದು ನಾನು ಅಂತಹ ಸಕಾರಾತ್ಮಕ ಶಕ್ತಿಯನ್ನು ಅನುಭವಿಸಿದ್ದೇನೆ ಎಂದರು. ಮುಖ್ಯಮಂತ್ರಿಗಳಾಗಿದ್ದ ತಮ್ಮ ತಂದೆ ಗುಂಡೂರಾವ್ ನಗರದ ಕ್ರೆಸೆಂಟ್ ರಸ್ತೆಯನ್ನು ಹರೇಕೃಷ್ಣ ರಸ್ತೆ ಎಂದು ಮರುನಾಮಕರಣ ಮಾಡಿದ್ದನ್ನು ಸಚಿವರು ನೆನಪಿಸಿಕೊಂಡರು.

ಸಾನ್ನಿಧ್ಯ ವಹಿಸಿದ್ದ ಭುವನಗಿರಿ ಆಶ್ರಮದ ಶ್ರೀ ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಇಸ್ಕಾನ್‌ನಿಂದಾಗಿ ಬೆಂಗಳೂರು ಒಂದು ಕ್ಷೇತ್ರವಾಗಿ ಮಾರ್ಪಾಡಾಗಿದೆ. ಅಕ್ರೂರನು ಮೂಲ ಕೃಷ್ಣಬಲರಾಮ ರಥಯಾತ್ರೆಯನ್ನು ಮಾಡಿ ಕಂಸನ ಸಂಹಾರವನ್ನು ಮಾಡಿದ್ದರು. ಇಸ್ಕಾನ್ ಹಮ್ಮಿಕೊಂಡಿರುವ ರಥಯಾತ್ರೆ ಅಧರ್ಮವನ್ನು ನಾಶ ಮಾಡಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಐಎಫ್ಎಸ್  ಅಧಿಕಾರಿ ಪ್ರಶಾಂತ್ ಪೀಸೆ, ಶಾಸಕ ಗೋಪಾಲಯ್ಯ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಇಸ್ಕಾನ್ ಅಧ್ಯಕ್ಷ ಶ್ರೀಮಧುಪಂಡಿತ ದಾಸರು, ಉಪಾಧ್ಯಕ್ಷ ಶ್ರೀಚಂಚಲಪತಿ ದಾಸರು ಮತ್ತಿತರರು ಉಪಸ್ಥಿತರಿದ್ದರು.

ನಂತರ 26 ಅಡಿ ಎತ್ತರದ ಭವ್ಯ ರಥವು ಇಸ್ಕಾನ್ ದೇವಾಲಯದಿಂದ ಆರಂಭವಾಗಿ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಸಾವಿರಾರು ಭಕ್ತರು ಹೂವು, ಹಣ್ಣು ಅರ್ಪಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net