ಮತದಾನ ಕೇಂದ್ರಕ್ಕೆ ರಿವಾಲ್ವರ್ ತಂದ ಅಧಿಕಾರಿ !

suleman sanadi
Published on

ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಚಾಲ್ತಿಯಲ್ಲಿದ್ದು ವೈವಿಧ್ಯ ವಿಚಾರಗಳು ಗಮನಸೆಳೆಯತೊಡಗಿವೆ. ಮತಪತ್ರಗಳ ಎಡವಟ್ಟು ಒಂದೆಡೆಯಾದರೆ, ಮತದಾರರನ್ನು ಓಲೈಸುವ ಪ್ರಯತ್ನ ಮತ್ತೊಂದೆಡೆ. ಇವೆಲ್ಲದರ ನಡುವೆ ಅಧಿಕಾರಿಯೊಬ್ಬರು ಮತದಾನ ಕೇಂದ್ರಕ್ಕೆ ರಿವಾಲ್ವರ್ ತರುವ ಮೂಲಕ ರಾಜ್ಯದ ಗಮನಸೆಳೆದಿದ್ದಾರೆ.

ಬೆಳಗಾವಿಯ ದೇಸನೂರ ಗ್ರಾಮದಲ್ಲಿ ಈ ಘಟನೆ ನಡೆದಿರುವಂಥದ್ದು. ಮತಗಟ್ಟೆ ಅಧಿಕಾರಿಯಾಗಿರುವ ಸುಲೇಮಾನ್​ ಸನದಿ ಮತಗಟ್ಟೆಗೆ ರಿವಾಲ್ವರ್ ತಂದವರು. ಅಷ್ಟಕ್ಕೇ ಸುಮ್ಮನಾಗದ ಅವರು ರಿವಾಲ್ವರ್ ಅನ್ನು ಎಲ್ಲರಿಗೂ ಕಾಣುವಂತೆ ಹಿಡಿದು ಭಯದ ವಾತಾವರಣ ಸೃಷ್ಟಿಸಿದರು.

ಕೂಡಲೇ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ಗ್ರಾಮೀಣ ಠಾಣೆಯ ಇನ್​ಸ್ಪೆಕ್ಟರ್​ ಸುನೀಲ್ ನಂದೇಶ್ವರ್ ಸ್ಥಳಕ್ಕಾಗಮಿಸಿ ಅಧಿಕಾರಿ ಸನದಿ ಮತ್ತು ಅವರ ಬಳಿ ಇದ್ದ ರಿವಾಲ್ವರ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ರಿವಾಲ್ವರ್​ಗೆ ಪರವಾನಗಿ ಇದ್ದು, ಅದು ಸರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತಗಟ್ಟೆಗೆ ರಿವಾಲ್ವರ್ ತಂದದ್ದೇಕೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಸನದಿ ವಿರುದ್ಧ ಶಿಸ್ತು ಕ್ರಮಕ್ಕೆ ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net