

ಗದಗ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.
ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ರೈತ ವಿಜಯಕುಮಾರ ಶರಣಪ್ಪ ಭಜಂತ್ರಿ (46) ಮೃತರು. ಇವರು ಹಮ್ಮಿಗಿ 3ನೇ ವಾರ್ಡ್ನಿಂದ ಗ್ರಾಪಂ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆ ಪ್ರಚಾರ ನಡೆಸಿ ಕಾರ್ಯದಲ್ಲಿ ಬಿಜಿಯಾಗಿರಬೇಕಿದ್ದ ರೈತ ವಿಜಯಕುಮಾರ ಶರಣಪ್ಪ ಭಜಂತ್ರಿ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಸಾಲಬಾಧೆಯಿಂದ ಆತ್ಮಹತ್ಯೆ ಎಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತರಿಗೆ ಕೆವಿಜಿ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್ನಲ್ಲಿ ಸುಮಾರು 8 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲಬಾಧೆಗೆ ಸಿಲುಕಿದ್ದ ಅವರು ಜಿಗುಪ್ಸೆಗೊಂಡಿದ್ದರು ಎನ್ನಲಾಗಿದೆ.