

ಚಿಕ್ಕೋಡಿ: ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಗ್ರಾಮದ ಜನರ ಹಿತವನ್ನು ಕಾಯಲು ತಮ್ಮ ಮನೆಯನ್ನೇ ಅಡವಿಟ್ಟು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮಾನವೀಯತೆ ಮೆರೆದು, ಇತರರಿಗೆ ಮಾದರಿಯಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಗವನಾಳ ಗ್ರಾಪಂ ಸದಸ್ಯ ಶ್ರೀನಿವಾಸ್ ಅವರು ಮನೆ ಅಡವಿಟ್ಟು ಬಂದಂತಹ 30 ಸಾವಿರ ರೂ. ಹಣದಲ್ಲಿ ಬಡವರಿಗೆ ಉಚಿತವಾಗಿ ಆಹಾರ ಕಿಟ್ ವಿತರಿಸಿದ್ದಾರೆ.
ಕರೊನಾ ಲಾಕ್ಡೌನ್ನಿಂದ ಇಡೀ ರಾಜ್ಯವೇ ಸ್ತಬ್ಧವಾಗಿದ್ದು, ಕೆಲಸವಿಲ್ಲದೇ ಯಾವುದೇ ಆದಾಯ ಹುಟ್ಟದಿರುವುದರಿಂದ ಅನೇಕ ಬಡಕುಟುಂಬಗಳು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಧಾವಿಸಿದ ಶ್ರೀನಿವಾಸ್, ಬಡಕುಟುಂಬಗಳನ್ನು ಗುರುತಿಸಿ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.
ಶ್ರೀನಿವಾಸ್ ಮಾನವೀಯ ಕಾರ್ಯಕ್ಕೆ ಇಡೀ ಗ್ರಾಮವೇ ಮೆಚ್ಚುಗೆ ಸೂಚಿಸಿದ್ದು, ಮತ ಹಾಕಿಸಿಕೊಂಡ ಕೆಲವರು ನಮಗೇಕೆ ಊರ ಉಸಾಬರಿ ಎಂದು ಸುಮ್ಮನ್ನೇ ಕೈಕಟ್ಟಿ ಕುಳಿತಿರುವ ಸಂದರ್ಭದಲ್ಲಿ ಶ್ರೀನಿವಾಸ್ ಮಾದರಿಯಾಗಿದ್ದಾರೆ.
ಕರೊನಾ ವೈರಸ್ ಜಾಗತಿಕವಾಗಿ ಮೃತ್ಯಕೂಪವನ್ನು ನಿರ್ಮಿಸಿದ್ದು, ಆರೋಗ್ಯ ಎಚ್ಚರಿಕೆಯ ನಡುವೆ ಮಾನವೀಯತೆಯನ್ನು ಪರೀಕ್ಷೆಗೆ ಒಡ್ಡಿದೆ. ಬಿಕ್ಕಟ್ಟಿನ ಸಮಯದಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುವ ಕುಟುಂಬಗಳಿಗೆ ಸಹಾಯಾಸ್ತ ಅಗತ್ಯವಾಗಿದ್ದು, ಮಾನವನ ಮಾನವೀಯ ಗುಣವನ್ನು ಕರೊನಾ ನಿಜಕ್ಕೂ ಪರೀಕ್ಷೆಗೆ ಒಡ್ಡಿದೆ. (ದಿಗ್ವಿಜಯ ನ್ಯೂಸ್)