

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.62.31ರಷ್ಟು ಮತದಾನವಾಗಿದೆ. ಮತಗಟ್ಟೆ ಸಂಖ್ಯೆ 215 ಮತ್ತು 224ರಲ್ಲಿ ಗರಿಷ್ಠ ಶೇ.70 ರಷ್ಟು ಮತದಾನವಾಗಿದ್ದರೆ, ಮತಗಟ್ಟೆ ಸಂಖ್ಯೆ 222ರಲ್ಲಿ ಕನಿಷ್ಠ ಶೇ.54ರಷ್ಟು ಮತದಾನವಾಗಿದೆ.
ಬೆಳಗ್ಗೆ ಮಂದಗತಿಯಲ್ಲಿ ಸಾಗಿದ ಮತದಾನ ಮಧ್ಯಾಹ್ನದ ವೇಳೆ ಬಿರುಸುಗೊಂಡಿತು. ಮಧ್ಯಾಹ್ನ 12 ಗಂಟೆ ತನಕ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನದ ಬಳಿಕ ಗುಂಪು ಗುಂಪಾಗಿ ಬಂದ ಮತದಾರರು ಮತದಾನದ ಹಕ್ಕು ಚಲಾಯಿಸಿದರು.
ಅನಾರೋಗ್ಯ ಪೀಡಿತರು ಹಾಗೂ ಅಶಕ್ತರು ವೀಲ್‌ಚೇರ್‌ನಲ್ಲಿ ಬಂದು ಮತದಾನ ಮಾಡಿದ್ದು, 90 ವರ್ಷ ಮೇಲ್ಪಟ್ಟ ಮತದಾರರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ಮಾದರಿಯಾದರು. ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದ ಗಂಗೊಳ್ಳಿ ಬಂದರು ಪಂಜುರ್ಲಿ ತೋಡಿನ ವಠಾರದ ಬಹುತೇಕ ಮತದಾರರು ಮತದಾನದಲ್ಲಿ ಪಾಲ್ಗೊಂಡು ಮತದಾನದ ಹಕ್ಕು ಚಲಾಯಿಸಿದರು.
ಗಂಗೊಳ್ಳಿ ಗ್ರಾಮ ಪಂಚಾಯಿತಿಯ 33 ಸದಸ್ಯ ಸ್ಥಾನಕ್ಕೆ 86 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಪಂಚಾಯಿತಿ ವ್ಯಾಪ್ತಿಯ 13 ವಾರ್ಡ್‌ಗಳ ಎಲ್ಲ 8 ಕ್ಷೇತ್ರಗಳಲ್ಲಿ ಪೈಪೋಟಿ ಕಂಡುಬಂದಿದೆ.
ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ ಮತ್ತು ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಮತಗಟ್ಟೆಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಶರತ್‌ಕುಮಾರ್ ಶೆಟ್ಟಿ, ಅರವಿಂದ ಪೂಜಾರಿ ಮೊದಲಾದವರು ಮತದಾನ ಸ್ಥಳಕ್ಕೆ ಭೇಟಿ ನೀಡಿದರು.
ಡಿ.11ರಂದು ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ್ದು, ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ್ದರಿಂದ ಫಲಿತಾಂಶ ಏರುಪೇರಾಗುವ ಸಾಧ್ಯತೆ ಇದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿರುವ ಕಾಂಗ್ರೆಸ್‌ಗೆ ಎಸ್‌ಡಿಪಿಐ ಬೆಂಬಲ ಘೋಷಿಸಿರುವುದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಹುಮ್ಮಸ್ಸು ಹೆಚ್ಚಿಸಿದ್ದರೂ, ಇದು ಮುಳುವಾಗುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.
ಮತದಾನಕ್ಕೆ ಆಗಮಿಸಿದ ಮತದಾರರಿಗೆ ಚುನಾವಣಾ ಆಯೋಗದಿಂದ ಚೀಟಿ ದೊರೆಯದಿದ್ದರಿಂದ ಕೆಲವು ಸಮಯ ಸಮಸ್ಯೆಗಳಿಗೆ ಕಾರಣವಾಯಿತು. ಮತದಾರರು ಮತಗಟ್ಟೆ ಹೊರಗೆ ಬಿಎಲ್‌ಒ ಹತ್ತಿರ ಚೀಟಿಗಾಗಿ ಕಾದು ನಿಂತಿರುವ ದೃಶ್ಯಗಳು ಕಂಡುಬಂದಿದ್ದು, ಗೊಂದಲಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.