ಪುತ್ತೂರು: ಪುತ್ತೂರಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕೆಲಸವಾದರೆ ವೈದ್ಯಕೀಯ ಕಾಲೇಜು ಸುಲಭವಾಗಿ ಪಡೆಯಬಹುದು. ಸಮಿತಿಯನ್ನು ವಿಟ್ಲ, ಉಪ್ಪಿನಂಗಡಿ, ಬೆಳ್ತಂಗಡಿಯ ಸೇರಿ ಎಲ್ಲ ಭಾಗಕ್ಕೆ ವಿಸ್ತರಣೆ ಮಾಡಬೇಕು. ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಿ ಗ್ರಾಮಸಭೆಯಲ್ಲಿ ಬೇಡಿಕೆ ದಾಖಲಿಸಿ ಸರ್ಕಾರಕ್ಕೆ ಕಳುಹಿಸಬೇಕು. ಜಾಗಕ್ಕೆ ಸರಿಯಾದ ಸಂಪರ್ಕ ರಸ್ತೆಯ ನಿರ್ಮಾಣ ಕಾರ್ಯ ಹಂತ ಹಂತವಾಗಿ ಮಾಡಬೇಕು.
ಬೊಳುವಾರು ಬೈಪಾಸ್ ರಸ್ತೆಯ ಉದಯಗಿರಿಯಲ್ಲಿ ಭಾನುವಾರ ನಡೆದ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸಭೆಯಲ್ಲಿ ಜನರಿಂದ ಕೇಳಿ ಬಂದ ಅಭಿಪ್ರಾಯವಾಗಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಅಭಿವೃದ್ಧಿ ಮಾಡುವುದಕ್ಕಾಗಿ ಜನ ಆಯ್ಕೆ ಮಾಡಿ ಕಳುಹಿಸುತ್ತಾರೆ. ಕಾಲು ಎಳೆಯುವ ಬದಲು ಎಲ್ಲರ ಮಾರ್ಗದರ್ಶನ ಪಡೆದು ಜನರಿಗೆ ಬೇಕಾದ ಕೆಲಸಗಳನ್ನು ಮಾಡಬೇಕು. ಉದ್ಯಮಗಳು ಬರಬೇಕು, ಪ್ರವಾಸೋದ್ಯಮ ಕೇಂದ್ರ ಆಗಬೇಕು, ಮೆಡಿಕಲ್ ಕಾಲೇಜು ನಿರ್ಮಾಣ, ಒಳಚರಂಡಿ ವ್ಯವಸ್ಥೆ ಆಗಬೇಕೆಂಬ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಸಾಮಾನ್ಯವಾಗಿ ಬರುವ ಅನುದಾನಗಳ ಹೊರತು ಹೊಸ ವಿಶೇಷ ಯೋಜನೆಯನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಹೋರಾಟ ಸಮಿತಿಯ ಗೌರವಾಧ್ಯಕ್ಷ ಅಣ್ಣ ವಿನಯಚಂದ್ರ ಮಾತನಾಡಿ ಪುತ್ತೂರು ಜಿಲ್ಲಾ ಕೇಂದ್ರವಾಗಿ ಹೊರಹೊಮ್ಮಲು ವಿವಿಧ ವ್ಯವಸ್ಥೆಗಳು ಬೇಕಾಗಿದ್ದು, ಇದರಲ್ಲಿ ಮೆಡಿಕಲ್ ಕಾಲೇಜು ಒಂದು ಪೂರಕ ವ್ಯವಸ್ಥೆಯಾಗಿದೆ. ಈಗಾಗಲೇ ಜಾಗ ಗುರುತಿಸಿದ ಸೇಡಿಯಾಪು ರಾಷ್ಟ್ರೀಯ ಹೆದ್ದಾರಿಗೂ ಸಮೀಪದಲ್ಲಿದೆ. ಎಲ್ಲರ ಬೆಂಬಲ ಗಳಿಸಿಕೊಂಡು ಹೋರಾಟ ನಡೆಯಬೇಕಾಗಿದೆ. ಅಽಕಾರಿಗಳ ಕೈಗೆ ಖಾಲಿ ಜಾಗ ಸಿಕ್ಕಾಗ ಯಾವುದೋ ಯೋಜನೆ ತಂದು ಹಾಕುತ್ತಾರೆ, ಆದರೆ ಮೆಡಿಕಲ್ ಕಾಲೇಜಿನ ಜಗದಲ್ಲಿ ಅದೇ ಯೋಜನೆ ಬರಬೇಕು ಎಂದು ತಿಳಿಸಿದರು.
ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ಎಂ. ಬಿ. ವಿಶ್ವನಾಥ, ಉಪಾಧ್ಯಕ್ಷ ವಿಶ್ವಪ್ರಸಾದ್ ಸೇಡಿಯಾಪು, ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿಸೋಜ ಉಪಸ್ಥಿತರಿದ್ದರು.