ಮಾನಸಿಕ ಆರೋಗ್ಯ ಸೇವೆಗೆ ಟೋಲ್​ ಫ್ರೀ ಸಹಾಯವಾಣಿ ಆರಂಭಿಸಿದ ಕೇಂದ್ರ ಸರ್ಕಾರ

helpline
Published on

ನವದೆಹಲಿ: ದೇಶದ ಜನರಿಗೆ ವಾರದ ಏಳೂ ದಿನ 24 ಗಂಟೆ ಕಾಲ ಮಾನಸಿಕ ಸ್ಥೈರ್ಯ ನೀಡುವ, ಧೈರ್ಯ ತುಂಬುವ ಸಲುವಾಗಿ ಟೋಲ್​ ಫ್ರೀ ಸಹಾಯವಾಣಿ 'ಕಿರಣ್​' (1800-599-0019) ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಈ ಸಹಾಯವಾಣಿಗೆ ಸೋಮವಾರ ಚಾಲನೆ ನೀಡಿದ್ದಾರೆ.

ಈ ಸಹಾಯವಾಣಿಯು ಲೈಫ್​ಲೈನ್​ ರೀತಿ ಕೆಲಸ ಮಾಡಲಿದ್ದು, ಸಲಹೆ, ಸಮಾಲೋಚನೆ ಮತ್ತು ರೆಫರೆನ್ಸ್​ಗಳನ್ನು ಕರೆಮಾಡುವವರಿಗೆ ಒದಗಿಸಲಿದೆ. ಈಗ ಆರಂಭಿಕ ಹಂತದಲ್ಲಿ ದೇಶದ 13 ಭಾಷೆಗಳಲ್ಲಿ ಇದರ ಸೇವೆ ಲಭ್ಯವಿದೆ. ಸಹಾಯವಾಣಿಯು ಮೆಂಟಲ್ ಹೆಲ್ತ್​ ರಿಹ್ಯಾಬಿಲಿಟೇಶನ್​ ಸರ್ವೀಸಸ್​ಗೆ ಸಂಬಂಧಿಸಿದ್ದಾಗಿದ್ದು, ಆರಂಭಿಕ ಸ್ಕ್ರೀನಿಂಗ್​, ಡಿಸ್ಟ್ರೆಸ್​ ಮ್ಯಾನೇಜ್​ಮೆಂಟ್​, ಮಾನಸಿಕ ಸ್ವಾಸ್ಥ್ಯ, ಧನಾತ್ಮಕ ನಡವಳಿಕೆ ಉತ್ತೇಜಿಸುವುದು, ಮಾನಸಿಕ ಸಂಘರ್ಷ ನಿರ್ವಹಣೆ ಮುಂತಾದವುಗಳ ವಿಚಾರವಾಗಿ ನೆರವಿಗೆ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸಹಾಯವಾಣಿಯ ತಾಂತ್ರಿಕ ಮಾಹಿತಿಯನ್ನು ಒದಗಿಸಿದ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಬೋದ್ ಸೇಥ್, ಬಿಎಸ್​ಎನ್​ಎಲ್​ ಇದರ ತಾಂತ್ರಿಕ ಸೇವೆಯನ್ನು ಒದಗಿಸುತ್ತಿದೆ. ದೇಶದ 660 ಕ್ಲಿನಿಕಲ್ ಮತ್ತು ರಿಹ್ಯಾಬಿಲಿಟೇಶನ್​​ ಸೈಕಾಲಜಿಸ್ಟ್​ಗಳು ಮತ್ತು 668 ಸೈಕ್ರಿಯಾಟಿಸ್ಟ್​ಗಳು ಈ ಸಹಾಯವಾಣಿ ಜತೆಗೆ ಕೈ ಜೋಡಿಸಿದ್ದಾರೆ. ಕನ್ನಡ, ಮಲಯಾಳಂ, ಮರಾಠಿ, ಬಂಗಾಳಿ, ಉರ್ದು, ಇಂಗ್ಲಿಷ್​, ತಮಿಳು, ಒಡಿಯಾ, ತೆಲುಗು, ಪಂಜಾಬಿ, ಗುಜರಾತಿ, ಅಸ್ಸಾಮೀಸ್, ಹಿಂದಿ ಸೇರಿ 13 ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆ ಎಂದು ವಿವರಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net