ಪಟ್ಟು ಬಿಡದ ಸಾರಿಗೆ ನೌಕರರು: ಸಂಧಾನಕ್ಕೆ ಪ್ರತಿಷ್ಠೆಯ ಕೊಳ್ಳಿ

pressmeet
Published on

ಬೆಂಗಳೂರು: ಕ್ಷಣಕ್ಕೊಂದು ತಿರುವು, ಹಲವು ನಾಟಕೀಯ ಬೆಳವಣಿಗೆಗಳ ನಡುವೆ ಸಾರಿಗೆ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ. ಭಾನುವಾರ ನಡೆದ ಸಂಧಾನ ಮಾತುಕತೆಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಸರ್ಕಾರ ಸಾರಿಹೇಳಿದರೆ, ನಮ್ಮ ಬೇಡಿಕೆ ಈಡೇರದ ಹೊರತು ಬಸ್ ಸಂಚಾರ ಆರಂಭಿಸುವುದಿಲ್ಲ ಎಂದು ನೌಕರರು ಪಟ್ಟುಹಿಡಿದು ಧರಣಿ ಮುಂದುವರಿಸಿದ್ದಾರೆ. ಸರ್ಕಾರದ ತೀರ್ವನಗಳು ಅಪೂರ್ಣವಾಗಿವೆ. ಚರ್ಚೆಯೂ ತೃಪ್ತಿ ನೀಡಿಲ್ಲ. ಹೀಗಾಗಿ ಮುಷ್ಕರ ಮುಂದುವರಿಕೆಗೆ ತೀರ್ವನಿಸಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಘೋಷಿಸಿದರು. ಸರ್ಕಾರ ಕೂಡ ತನ್ನ ನಿಲುವಿಗೆ ಅಂಟಿಕೊಂಡಿದ್ದು ಅವಶ್ಯ ಬಿದ್ದರೆ ಎಸ್ಮಾ ಪ್ರಯೋಗಕ್ಕೂ ಸಿದ್ಧ ಎಂಬ ಪರೋಕ್ಷ ಸಂದೇಶ ರವಾನಿಸಿದೆ.

ವಿಕಾಸಸೌಧದಲ್ಲಿ ಸರಣಿ ಸಭೆ, ಚರ್ಚೆ ಬಳಿಕ, ಸಾರಿಗೆ ಖಾತೆಯನ್ನೂ ಹೊಂದಿರುವ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ ಸರ್ಕಾರಿ ನೌಕರರೆಂದು ಪರಿಗಣಿಸುವುದು ಕಷ್ಟ ಎಂದು ಸ್ಪಷ್ಟಪಡಿಸಲಾಗಿದೆ. ಉಳಿದ ಬಹುತೇಕ ಬೇಡಿಕೆಗಳಿಗೆ ಸಿಎಂ ಸೂಚನೆಯಂತೆ ಹಣಕಾಸು ಇಲಾಖೆ ಒಪ್ಪಿದೆ. ಯಶಸ್ವಿ ಮಾತು ಕತೆಯಿಂದಾಗಿ ಮುಷ್ಕರ ಅಂತ್ಯಗೊಂಡಿದೆ. ಭಾನುವಾರ ರಾತ್ರಿಯಿಂದಲೇ ಬಸ್ ಸಂಚಾರ ಪುನರಾರಂಭವಾಗಲಿದೆ ಎಂದು ಸವದಿ ಪ್ರಕಟಿಸಿದ್ದರು. ಆದರೆ, ಮುಷ್ಕರ ನಿರತರ ಸ್ಥಳಕ್ಕೆ ತೆರಳಿದ ಪ್ರತಿನಿಧಿಗಳು ಮುಷ್ಕರದ ನಿಲು ವಲ್ಲಿ ಬದಲಾವಣೆ ಇಲ್ಲ ಎಂದು ಯೂಟರ್ನ್ ಹೊಡೆದರು.

ಇಂದು ಸಿಎಂ ಸಭೆ

ಬಿಕ್ಕಟ್ಟು ಬಗೆಹರಿಯದ ಕಾರಣ ಸಿಎಂ ಯಡಿಯೂರಪ್ಪ ಅವರೇ ಸಾರಿಗೆ ನೌಕರ ಸಂಘಟನೆಗಳ ಮುಖಂಡರೊಂದಿಗೆ ಸೋಮವಾರ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ.

ಅನಿಶ್ಚತತೆಯ ಸುಳಿವು

ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಕರೊನಾ ಕಷ್ಟದ ಕಾರಣಕ್ಕೆ ‘ಸರ್ಕಾರಿ ನೌಕರರು’ ಎಂಬ ಬೇಡಿಕೆಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಪರಿಗಣಿಸಲಿದೆ ಎಂದು ಹೇಳಿದರೆ, ಪಕ್ಕದಲ್ಲಿ ನಿಂತಿದ್ದ ಸಚಿವ ಸವದಿ ಇಲ್ಲವೆಂದು ತಲೆಯಲ್ಲಾಡಿಸಿದರು. ಇದನ್ನು ಗಮನಿಸಿದ ಚಂದ್ರಶೇಖರ್ ಮುಷ್ಕರ ವಾಪಸ್ ಪಡೆಯುವ ಬಗ್ಗೆ ಸ್ಪಷ್ಟ ಪ್ರತಿಕ್ರಿಯೆಗೆ ನಿರಾಕರಿಸಿ ಅನಿಶ್ಚತತೆಯ ಸುಳಿವು ನೀಡಿದರು. ಸ್ವಾತಂತ್ರ್ಯ ಉದ್ಯಾನವನಕ್ಕೆ ತೆರಳಿ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಜತೆಗೆ ಚರ್ಚಿಸಿ ಬಳಿಕ ನಿರ್ಧಾರ ಪ್ರಕಟಿಸುತ್ತೇವೆ ಎಂದು ‘ಅಡ್ಡಗೋಡೆ ಮೇಲೆ ದೀಪ’ವಿಟ್ಟಂತೆ ಹೇಳಿದರು.

ಸಚಿವದ್ವಯರಿಂದ ಮಹತ್ವದ ತಿರುವು

ಸವದಿ ಉದಾಸೀನತೆಯಿಂದಾಗಿ ಮುಷ್ಕರದ ಬಿಕ್ಕಟ್ಟು ಉಲ್ಬಣಿಸಿತ್ತು. ಹೀಗಾಗಿ ಮತ್ತೊಂದು ಸುತ್ತಿನ ಮಾತುಕತೆ ವಿಫಲವಾಗಬಾರದು ಎಂದು ಬಿಎಸ್​ವೈ ಚತುರ ನಡೆ ಅನುಸರಿಸಿದರು.

ನೋಂದಾಯಿತ ಸಂಘಟನೆಗಳ ಮುಖಂಡರ ಜತೆಗೆ ರ್ಚಚಿಸುವ ಹೊಣೆಯನ್ನು ಸವದಿಗೆ ಒಪ್ಪಿಸಿ, ಕಗ್ಗಂಟು ಸಡಿಲಿಸಿ ಸಂಧಾನ ಸಫಲಗೊಳಿಸುವ ಜವಾಬ್ದಾರಿಯನ್ನು ಸಚಿವರಾದ ಆರ್.ಅಶೋಕ್ ಮತ್ತು ಬಸವರಾಜ ಬೊಮ್ಮಾಯಿ ಹೆಗಲಿಗೆ ಹೊರಿಸಿದರು. ಸಚಿವದ್ವಯರು ಅಖಾಡಕ್ಕೆ ಇಳಿದ ನಂತರ ಮಾತುಕತೆ ಮಹತ್ವದ ತಿರುವು ಪಡೆಯಿತು. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮೂಲಕ ಒಕ್ಕೂಟದ ಪದಾಧಿಕಾರಿಗಳನ್ನು ಮಾತುಕತೆಗೆ ಸೆಳೆದು, ನಿರಂತರ ಕಸರತ್ತು ನಡೆಸಿ ಮನವೊಲಿಸುವಲ್ಲಿಯೂ ಯಶಸ್ವಿಯಾದರು.

ಮುಷ್ಕರದ ಬಿಸಿ

ಸಾರಿಗೆ ನೌಕರರು ಬಸ್ ನಿಲ್ದಾಣ ಹಾಗೂ ಡಿಪೋಗಳ ಬಳಿ ಮುಷ್ಕರ ನಡೆಸಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿ ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಖಾಸಗಿ ಬಸ್ ಸಹಕಾರ ಇಲ್ಲ

ಇನ್ನೊಂದೆಡೆ ಖಾಸಗಿ ಬಸ್​ಗಳ ನೆರವು ಪಡೆಯುವ ಸರ್ಕಾರದ ಆಶಯಕ್ಕೂ ಹಿನ್ನಡೆ ಉಂಟಾಗಿದೆ. ತೆರಿಗೆ ವಿನಾಯಿತಿ ನೀಡುವ ವಿಚಾರದಲ್ಲಿ ಸರ್ಕಾರ ಸ್ಪಂದಿಸಿಲ್ಲ ಎಂದು ಅಸಮಾಧಾನ ಹೊರಹಾಕಿರುವ ಖಾಸಗಿ ಬಸ್ ಮಾಲಿಕರ ಸಂಘಟನೆ, ಸರ್ಕಾರಕ್ಕೆ ಸಹಕಾರ ನೀಡಲ್ಲ ಎಂದು ಸ್ಪಷ್ಟವಾಗಿ ನಿರ್ಧಾರ ಪ್ರಕಟಿಸಿದೆ.

ತಪ್ಪದ ಪರದಾಟ

ಮೂರು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಪರಿಣಾಮ ಭಾನುವಾರವೂ ಪ್ರಯಾಣಿಕರಿಗೆ ಪರದಾಟ ತಪ್ಪಲಿಲ್ಲ. ಹೊರ ರಾಜ್ಯಗಳಿಂದ ರೈಲಿನಲ್ಲಿ ಕರ್ನಾಟಕಕ್ಕೆ ಬಂದು ಇಲ್ಲಿಂದ ಬಸ್​ನಲ್ಲಿ ತಮ್ಮ ಊರುಗಳಿಗೆ ತೆರಳಬೇಕಾದವರು ಹೆಚ್ಚಿನ ಬಾಡಿಗೆ ಕೊಟ್ಟು ಖಾಸಗಿ ವಾಹನದಲ್ಲೇ ಸಾಗಬೇಕಾಯಿತು

ಸರ್ಕಾರದ ಮುಂದಿನ ಆಯ್ಕೆಗಳು

  • ಎಸ್ಮಾ ಜಾರಿ ಎಚ್ಚರಿಕೆ ನೀಡುವ ಮೂಲಕ ಹೋರಾಟದ ತೀವ್ರತೆ ತಗ್ಗಿಸುವುದು
  • ಪರ್ಯಾಯವಾಗಿ ಖಾಸಗಿ ಬಸ್​ಗಳು, ಇತರ ವಾಹನಗಳ ಬಳಕೆ
  • ಖಾಸಗಿ ಚಾಲಕರನ್ನು ಬಳಸಿಕೊಂಡು ಸಾರಿಗೆ ಸಂಸ್ಥೆ, ನಿಗಮಗಳ ಬಸ್ ಸಂಚಾರ
  • ಕೆಲವು ಸಂಘಟನೆಗಳ ಮನವೊಲಿಸಿ ಕರ್ತವ್ಯಕ್ಕೆ ಕರೆತಂದು ಪೊಲೀಸ್ ಭದ್ರತೆ ನೀಡುವುದು

ಸವದಿ ವೈಫಲ್ಯ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಉಪ ಮುಖ್ಯಮಂತ್ರಿ ಹುದ್ದೆಯನ್ನು ಉಡುಗೊರೆಯಾಗಿ ಪಡೆದ ಲಕ್ಷ್ಮಣ ಸವದಿ ಸಾರಿಗೆ ಮುಷ್ಕರವನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ವೈಫಲ್ಯ ಕಂಡಿರುವುದು ಎದ್ದು ತೋರಿದೆ.

ಪ್ರಮುಖ ಖಾತೆಯ ಜವಾಬ್ದಾರಿ ಹೊತ್ತಿದ್ದರೂ ಈ ವಿಚಾರದಲ್ಲಿ ತೀವ್ರತೆ ಗ್ರಹಿಸದಿದ್ದದ್ದು, ಇಲಾಖೆ ಅಧೀನದಲ್ಲಿನ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು, ಕಾಂಗ್ರೆಸ್ ಹುನ್ನಾರ ಎಂದು ಉದಾಸೀನ ಮಾಡಿದ್ದು, ಕರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರದ ಮೇಲೆ ಒತ್ತಡ ಬೀಳದಂತೆ ಎಚ್ಚರಿಕೆ ವಹಿಸುವಲ್ಲಿ ವಿಫಲವಾಗಿದ್ದರ ಬಗ್ಗೆ ಪಕ್ಷದ ಮಟ್ಟದಲ್ಲೇ ಚರ್ಚೆಯಾಗಿದೆ. ಈವರೆಗೆ ಉದಾಸೀನ ವರ್ತನೆಗೆ ಸಾಕಷ್ಟು ಬೆಲೆತೆತ್ತಿದ್ದಾರೆ, ಸರ್ಕಾರದ ಉನ್ನತ ಜವಾಬ್ದಾರಿ ಇರುವಾಗಲೂ ಅದೇ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿ ಸಿಎಂ ಕೂಡ ಸವದಿಯವರಿಂದ ಈ ಬಿಕ್ಕಟ್ಟು ಪರಿಹರಿಸಲು ಸಾಧ್ಯವಿಲ್ಲ ಎಂದರಿತು ಗೃಹ ಹಾಗೂ ಕಂದಾಯ ಸಚಿವರ ಹೆಗಲಿಗೆ ಹೊಣೆ ವರ್ಗಾಯಿಸಿದ್ದರು.

ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ಸರ್ಕಾರ ಸಂಪೂರ್ಣ ಸೋತಿದೆ. ಲಕ್ಷ್ಮಣ ಸವದಿಯವರೇ, ಬಿಕ್ಕಟ್ಟುಗಳನ್ನು ನಿರ್ವಹಿಸುವುದೆಂದರೆ ಸದನದಲ್ಲಿ ಕೂತು ಮೊಬೈಲ್​ನಲ್ಲಿ ರೋಮಾಂಚನದ ಚಿತ್ರ ವೀಕ್ಷಿಸಿದಂತಲ್ಲ! | ಕರ್ನಾಟಕ ಕಾಂಗ್ರೆಸ್ (ಟ್ವೀಟರ್​ನಲ್ಲಿ)   ಸರ್ಕಾರ ಹಾಗೂ ರಾಜ್ಯದ ಜನರ ಉಪಯೋಗಕ್ಕಾಗಿ ಖಾಸಗಿ ಬಸ್​ಗಳು ಎಲ್ಲ ರೀತಿಯ ಸಹಕಾರವನ್ನು ನೀಡಲಿವೆ. ಸೇವೆ ನಿರಂತರವಾಗಿರಲಿದೆ. | ಕೆ.ಟಿ.ರಾಜಶೇಖರ ರಾಜ್ಯ ಖಾಸಗಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ಸಭೆಯ ತೀರ್ಮಾನಗಳು

  • ಆರೋಗ್ಯ ಸಂಜೀವಿನಿ ವಿಮಾ ಯೋಜನೆಯ ವ್ಯಾಪ್ತಿಗೆ ನಿಗಮದ ನೌಕರರು, ಕರ್ತವ್ಯದಲ್ಲಿದ್ದಾಗ ಕರೊನಾ ಸೋಂಕಿನಿಂದ ನೌಕರ ಮೃತಪಟ್ಟರೆ, ಅವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ
  • ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆ
  • ನೌಕರರ ತರಬೇತಿ ಅವಧಿ 2 ರಿಂದ 1 ವರ್ಷಕ್ಕೆ ಇಳಿಕೆ
  • ಎಚ್​ಆರ್​ಎಂಎಸ್ ವ್ಯವಸ್ಥೆ ಜಾರಿ, ಸಿಬ್ಬಂದಿ ಕರ್ತವ್ಯನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ (ಬಾಟಾ) ನೀಡುವುದು ಮುಂದುವರಿಕೆ
  • ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ, ಸಮಿತಿ ರಚನೆ, ಆರ್ಥಿಕ ಅಂಶಗಳ ಆಧಾರದಲ್ಲಿ 6ನೇ ವೇತನ ಆಯೋಗದ ಶಿಫಾರಸುಗಳನ್ನು ಅನ್ವಯಿಸುವ ಬೇಡಿಕೆ ಪರಿಗಣನೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net