

ಬೀದರ್: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಪ್ರಯುಕ್ತ ಶುಕ್ರವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ಜಿಲ್ಲೆ ಬಸ್ ಚಾಲಕರೊಬ್ಬರು ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟ ಬೆನ್ನಲ್ಲೇ ಶನಿವಾರ ಬೀದರ್ ಜಿಲ್ಲೆಯಲ್ಲಿ ಮತ್ತೊಬ್ಬ ಬಸ್ ಚಾಲಕ ಎದೆನೋವಿನಿಂದ ಕೊನೆಯುಸಿರೆಳೆದಿದ್ದಾರೆ.
ಔರಾದ್ ಡಿಪೋ ಚಾಲಕ ಮಕಬೂಲ್ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಎಲ್ಲೆಡೆ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಕೆಲಸಕ್ಕೆ ಹಾಜರಾಗಬೇಕು ಎಂಬ ಅಧಿಕಾರಿಗಳ ಒತ್ತಡ ಒಂದೆಡೆಯಾದರೆ, ಕೆಲಸಕ್ಕೆ ಯಾವುದೇ ಕಾರಣಕ್ಕೂ ಹೋಗುವದು ಬೇಡ ಎಂಬ ಮುಷ್ಕರ ನಿರತ ನೌಕರರ ಒತ್ತಡ ಇನ್ನೊಂದೆಡೆ. ಇದರ ಮಧ್ಯೆ ಮಕಬೂಲ್ ಬೆಳಗ್ಗೆ ಮಹಾರಾಷ್ಟ್ರದ ನಾಂದೇಡಗೆ ಕೆಲಸಕ್ಕೆ ತೆರಳಿದ್ದರು. ಒತ್ತಡದ ನಡುವೆ ಬಸ್ ಚಾಲನೆ ಮಾಡುತ್ತಿದ್ದ ಮಕಬೂಲ್ಗೆ ದೇಗಲೂರ ಸಮೀಪ ಎದೆನೋವು ಶುರುವಾಗಿದೆ. ತಕ್ಷಣ ಬಸ್ ಅನ್ನು ರಸ್ತೆಪಕ್ಕ ನಿಲ್ಲಿಸಿದ್ದಾರೆ. ಬಸ್ನಲ್ಲಿ ಹೃದಯಾಘಾತವಾಗಿ ಚಾಲಕ ಕೊನೆಯುಸಿರೆಳೆದರು.
ಕೆಲಸಕ್ಕೆ ಹಾಜರಾಗಲು ಅಧಿಕಾರಿಗಳ ಒತ್ತಡ, ಬೇಡ ಎಂದು ಯೂನಿಯನ್ ಒತ್ತಡ. ಇದರಿಂದ ಬಳಲಿದ್ದ ಚಾಲಕನಿಗೆ ಹೃದಯಘಾತವಾಗಿದೆ ಎಂದು ಹೇಳಲಾಗುತ್ತಿದೆ. ಮೃತದೇಹ ತರಲು ಅಧಿಕಾರಿಗಳು ದೇಗಲೂರನತ್ತ ಪ್ರಯಾಣ ಬೆಳೆಸಿದ್ದಾರೆ. ಮಕಬೂಲ್ ಔರಾದ್ ತಾಲೂಕಿನ ಸಂತಪುರ್ ನಿವಾಸಿ.
ಬೆಳಗಾವಿಯ ಎರಡನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ ಚಾಲಕ ದತ್ತಾ ಮಂಡೋಳ್ಕರ್(58) ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದರು. ಶುಕ್ರವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರು ಮನೆಗೆ ತೆರಳಿದ್ದರು. ಆದರೆ ತಡರಾತ್ರಿ ಕೊನೆಯುಸಿರೆಳೆದರು.