ಆರ್​ಸಿಬಿ ಫ್ಯಾನ್ಸ್ ಸಾವು ಪ್ರಕರಣ; ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದ​ರಾಜುಗೆ ಗೇಟ್​ಪಾಸ್​

ವಿಜಯವಾಣಿ (32)
Published on

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜುಗೆ ಇದೀಗ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಯಿಂದ ಗೇಟ್​ಪಾಸ್​ ನೀಡಲಾಗಿದೆ. ಈ ಕುರಿತು ಸ್ವತಃ ಸಿದ್ದರಾಮಯ್ಯನವರೇ ಪತ್ರದ ಮೂಲಕ ಆದೇಶ ಹೊರಡಿಸಿದ್ದಾರೆ.

ಆರ್​ಸಿಬಿ ಪರ ಬ್ಯಾಟ್​ ಬೀಸಿದ್ದ ಗೋವಿಂದರಾಜು, ತರಾತುರಿಯಲ್ಲೇ ಕಾರ್ಯಕ್ರಮ ಆಯೋಜಿಸಿ ಸಿಎಂರನ್ನು ಕರೆಸಿದ್ದರು ಎಂದು ಸಂಪುಟ ಸಭೆಯಲ್ಲಿ ಸಚಿವರು ಸಿಟ್ಟಾಗಿದ್ದರು. ಇದರ ಬೆನ್ನಲ್ಲೇ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜುರನ್ನು ಬಿಡುಗಡೆ ಮಾಡುವಂತೆ ಸಿಎಂ ಆದೇಶಿಸಿದ್ದಾರೆ.

ನನ್ನ ಪಾತ್ರವಿಲ್ಲ!

ಸಿಎಂ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಲು ಮುಖ್ಯಮಂತ್ರಿಗಳು ಸೂಕ್ತ ಕಾರಣ ತಿಳಿಸಿಲ್ಲ. ಆದರೆ, ಖುದ್ದಾಗಿ ಸಿದ್ದರಾಮಯ್ಯ ಅವರಿಗೆ ಆರ್​ಸಿಬಿ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳುವಂತೆ ಗೋವಿಂದರಾಜು ಒತ್ತಾಯಿಸಿದ್ದರು ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಗೋವಿಂದರಾಜು, "ಇದೆಲ್ಲ ಸುಳ್ಳು. ನನ್ನ ಮಾತುಗಳನ್ನು ತಿರುಚಲಾಗಿದೆ. ಅಷ್ಟಕ್ಕೂ ಸಿಎಂಗೆ ಸಲಹೆ ಕೊಡಲು ನಾನ್ಯಾರು?" ಎಂದು ಹೇಳಿದ್ದಾರೆ.

ಎಚ್​ಡಿಕೆ ಗುಡುಗು

ಇನ್ನು ಇಂದಿನ ಬಿಜೆಪಿ-ಜೆಡಿಎಸ್​ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ, "ಇಲ್ಲಿ ಸಿಎಂ ಅವರದ್ದೇ ತಪ್ಪು. ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವಂತೆ ಒತ್ತಡ ತಂದ ರಾಜಕೀಯ ಕಾರ್ಯದರ್ಶಿಯನ್ನು ಮೊದಲು ಹುದ್ದೆಯಿಂದ ಕಿತ್ತುಬಿಸಾಡಬೇಕು. ನೈತಿಕತೆ ಇದ್ದದ್ದೇ ಆದರೆ, ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಬೇಕು. ಇಲ್ಲವಾದಲ್ಲಿ ಪಕ್ಷದ ಹೈಕಮಾಂಡ್​ ಈ ಮೂವರನ್ನು ಕಿತ್ತೊಗೆಯಬೇಕು" ಎಂದು ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net