ಸ್ವಾತಂತ್ರ್ಯ ಸೇನಾನಿ ಮೈಲಾರ ಮಹಾದೇವ ತತ್ವಾದರ್ಶಗಳನ್ನು ಪಾಲಿಸಿ: ಥಾವರ್​ ಚಂದ್​ ಗೆಹ್ಲೋಟ್​

Governor
Published on

ಬೆಂಗಳೂರು: ದೇಶದ ಸ್ವಾತಂತ್ರ್ಯ ಮತ್ತು ಕಲ್ಯಾಣಕ್ಕಾಗಿ ತಮ್ಮನ್ನು ತ್ಯಾಗ ಮಾಡಿದ ಮಹಾನ್ ಮಾನವತಾವಾದಿ ಸ್ವಾತಂತ್ರ್ಯ ಸೇನಾನಿ ಹುತಾತ್ಮ ಮೈಲಾರ ಮಹದೇವಪ್ಪ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಒಟ್ಟಾಗಿ ಪಾಲಿಸುವುದರ ಜೊತೆಗೆ ಈ ದೇಶದ ಸ್ವಾತಂತ್ರ್ಯ ಮತ್ತು ಸಮೃದ್ಧಿಗಾಗಿ ಅತ್ಯುನ್ನತ ತ್ಯಾಗ ಮಾಡಿದ ಇಂತಹ ಮಹಾನ್ ಪುರುಷರ ಮಾದರಿಯನ್ನು ಅನುಸರಿಸಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದ್ದಾರೆ.

ಗುರುವಾರ ನಗರದ ಗಾಂಧಿಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹಾವೇರಿ ಆಯೋಜಿಸಿದ್ದ ಹುತಾತ್ಮ ಮೈಲಾರ ಮಹಾದೇವ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರ ಅವರು ಮಹಾನ್ ಪುರುಷರ ಮಾದರಿಯನ್ನು ಅನುಸರಿಸಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಹಾತ್ಮ ಗಾಂಧೀಜಿಯವರ ಪರಮೋಚ್ಚ ಶಿಷ್ಯ, ಹುತಾತ್ಮ ಮೈಲಾರ ಮಹಾದೇವ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಅಹಿಂಸೆಯ ಮೂಲಕ ತಮ್ಮ ಸಂಪೂರ್ಣ ಜೀವನವನ್ನು ತ್ಯಾಗ ಮಾಡಿದರು. ಇಂದು ಅವರ 112 ನೇ ಜನ್ಮದಿನದಂದು ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಹೆಮ್ಮೆ ಎಂದು ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ.

ThawarChand Gehlot

ಮಹದೇವಪ್ಪನವರ ಜನ್ಮಸ್ಥಳವಾದ ಹಾವೇರಿಯ ರೈಲು ನಿಲ್ದಾಣವನ್ನು ಕೆಲವು ವರ್ಷಗಳ ಹಿಂದೆ ಭಾರತ ಸರ್ಕಾರವು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ 'ಮಹದೇವಪ್ಪ ಮೈಲಾರ್ ರೈಲು ನಿಲ್ದಾಣ' ಎಂದು ಮರುನಾಮಕರಣ ಮಾಡಿದೆ. ಇದರೊಂದಿಗೆ ಭಾರತ ಸರ್ಕಾರ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿರುವುದು ಹಾಗೂ ಇವರ ಸ್ಮರಣಾರ್ಥ ಕರ್ನಾಟಕ ಸರ್ಕಾರ "ಶಹೀದ್ ಮೈಲಾರ್ ಮಹದೇವಪ್ಪ ರಾಷ್ಟ್ರೀಯ ಸ್ಮಾರಕ ಟ್ರಸ್ಟ್" ಸ್ಥಾಪಿಸಿರುವುದು ಸಂತಸ ತಂದಿದೆ ಹಾಗೂ ಇದು ನಮ್ಮೆಲ್ಲ ಕರ್ನಾಟಕದವರಿಗೆ ಹೆಮ್ಮೆಯ ವಿಷಯ.

ಮಹಾದೇವಪ್ಪ ಅವರು ದೇಶಭಕ್ತಿಯ ಉತ್ಸಾಹದಿಂದ ಸಬರಮತಿಗೆ ಹೋದರು. ಗಾಂಧೀಜಿ ಅವರಿಂದ ಪ್ರಭಾವಿತರಾದರು ಮತ್ತು ಅವರಿಗೆ ಸಬರಮತಿ ಆಶ್ರಮದಲ್ಲಿ ಉಳಿಯಲು ಅವಕಾಶ ನೀಡಿದರು. ಗಾಂಧೀಜಿ ಮತ್ತು ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡ ನಂತರ ಅವರು ಸಬರಮತಿ ಆಶ್ರಮದಲ್ಲಿ ಖಾದಿ ನೂಲುವ ಕೆಲಸದಲ್ಲಿ ಕಾಲ ಕಳೆಯತೊಡಗಿದರು. ಮಹಾತ್ಮ ಗಾಂಧಿಯವರು ಆಯ್ಕೆ ಮಾಡಿದ 78 ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸಬರಮತಿಯಿಂದ ದಂಡಿಗೆ ಪ್ರಯಾಣವನ್ನು ಪ್ರಾರಂಭಿಸಿದ ಹಾಗೂ ಈ ಗುಂಪಿನಲ್ಲಿದ್ದ ಕರ್ನಾಟಕದ ಏಕೈಕ ಪ್ರತಿನಿಧಿ ಮಹಾದೇವಪ್ಪ ಮೈಲಾರ್. ‘ನಮ್ಮ ಹೋರಾಟ ಅಹಿಂಸಾತ್ಮಕ’, ಪೊಲೀಸರನ್ನು ಕೊಲ್ಲಬೇಡಿ, ಹಿಂಸಾಚಾರ ಮಾಡಬೇಡಿ’ ಎಂದು ಮಹಾದೇವಪ್ಪ ಅವರು ತಮ್ಮ ಸಂಗಡಿಗರಿಗೆ ಹೇಳಿ, ಅಹಿಂಸಾತ್ಮಕವಾಗಿ ಹೋರಾಟ ನಡೆಸಿದ ಮಾಹಾನ್ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ.

Governor

ಅನೇಕ ವೀರರ ತ್ಯಾಗದಿಂದಾಗಿ ನಮ್ಮ ದೇಶಕ್ಕೆ ದೊರೆತು ಸ್ವಾತಂತ್ರ್ಯದ ನಂತರ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯನ್ನು ಕಂಡಿದ್ದೇವೆ. ಪ್ರಸ್ತುತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ಸ್ವಾತಂತ್ರ್ಯ ಪಡೆದು ನೂರು ವರ್ಷ ಪೂರೈಸುವುದರೊಳಗಾಗಿ ಭಾರತ ವಿಶ್ವ ಗುರು ಸ್ಥಾನದಲ್ಲಿರಬೇಕಾದರೆ, ಇಂತಹ ಮಹಾನ್ ನಾಯಕರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಗಬೇಕು ಎಂದ ಅವರು, ಅಭಿವೃದ್ಧಿಯ ಜೊತೆ ಜೊತೆಗೆ ಪರಿಸರ ಸಂರಕ್ಷಣೆ ಉತ್ತಮ ವಾತವರಣ ನಿರ್ಮಾಣವೂ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಶ್ರಾಂತ ಕುಲಪತಿ ಡಾ.ಎ ಮುರಿಗೆಪ್ಪ ಅವರು ಬರೆದಿರುವ " ಅಹಿಂಸೆ ಪ್ರತಿಪಾದಕ ಹುತಾತ್ಮ ಮೈಲಾರ ಮಹದೇವ" ಪುಸ್ತಕವನ್ನು ರಾಜ್ಯಪಾಲರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಎಚ್.ಕೆ.ಪಾಟೀಲ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ಡಾ.ವೂಡೆ ಪಿ. ಕೃಷ್ಣ, ಹಿರೇಕೆರೂರು ಶಾಸಕರಾದ ಯು.ಬಿ. ಬಣಾಕರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಮನು ಬಳಿಗಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net