

ವಿಜಯವಾಣಿ ಸುದ್ದಿಜಾಲ ಈಶ್ವರಮಂಗಲ
ಹಾಲಿನ ದರ ಹೆಚ್ಚಳ ಸರ್ಕಾರದ ನಿರ್ಧಾರವಾಗಿದ್ದು, ಇದರಲ್ಲಿ ಒಕ್ಕೂಟದ ಯಾವುದೇ ಪಾತ್ರವಿಲ್ಲ. ಹಾಲಿನ ಗುಣಮಟ್ಟವನ್ನು ಹೆಚ್ಚಳ ಮಾಡಲಾಗಿದ್ದು, 2 ರೂ.ಜಾಸ್ತಿ ಮಾಡಿದ್ದರೂ ಪ್ಯಾಕೆಟ್‌ನಲ್ಲಿ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಗ್ರಾಹಕರಿಗೆ ಸಿಗುತ್ತಿದೆ. ಇತರ ಆಹಾರ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಹಿಂಡಿ ದರವೂ ಹೆಚ್ಚಾಗಿದೆ. ಹೈನುಗಾರರಿಗೆ ಕೊಡುವ ಹಾಲಿನ ದರ ದ.ಕ ಜಿಲ್ಲೆಯಲ್ಲಿ ಅತಿ ಹೆಚ್ಚು ಇದೆ ಎಂದು ದ.ಕ.ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಡಿ.ಆರ್.ಸತೀಶ್ ರಾವ್ ಹೇಳಿದರು.
ಪರ್ಪುಂಜದಲ್ಲಿ ಮಂಗಳವಾರ ನಡೆದ ಒಳಮೊಗ್ರು ಗ್ರಾಮದ ಪರ್ಪುಂಜ, ಕುಟ್ಟಿನೋಪಿನಡ್ಕ, ಕುರಿಯ ಗ್ರಾಮದ ಡಿಂಬ್ರಿಬೈಲು, ಆರ್ಯಾಪು ಗ್ರಾಮದ ಸಂಟ್ಯಾರು, ಕೂರೇಲು ವ್ಯಾಪ್ತಿಗೆ ಒಳಪಟ್ಟ ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಸಭೆಯಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಕ್ಕೂಟ ಹಾಗೂ ಬ್ಯಾಂಕ್‌ನಿಂದ ಬಹಳಷ್ಟು ಸಹಕಾರ ನೀಡಲಾಗುತ್ತಿದ್ದು, ಯುವಕರು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು. ಸಂಘದ ಗಳಿಸಿದ ನಿವ್ವಳ ಲಾಭದ ಅನುಗುಣವಾಗಿ ಸದಸ್ಯರಿಗೆ ಲೀಟರ್‌ಗೆ 66 ಪೈಸೆ ಬೋನಸ್ ಹಾಗೂ ಶೇ.10 ಡಿವಿಡೆಂಡ್ ನೀಡುವುದಾಗಿ ಘೋಷಣೆ ಮಾಡಿದರು. ಸಂಘಕ್ಕೆ ಸ್ವಂತ ಕಟ್ಟಡ ಹಾಗೂ ಮಿಲ್ಕ್ ಪಾರ್ಲರ್ ಆರಂಭಿಸುವ ಯೋಜನೆ ಇದೆ ಎಂದು ತಿಳಿಸಿದರು.
ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ ಎಸ್.ಮಾತನಾಡಿದರು. ಸಂಘದ ಕಾರ್ಯದರ್ಶಿ ಸರೋಜ ಆರ್.ಶೆಟ್ಟಿ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ನಿರ್ದೇಶಕರಾದ ಬಾರಿಕೆ ನಾರಾಯಣ ರೈ, ಜೈರಾಜ್ ಭಂಡಾರಿ ಡಿಂಬ್ರಿ, ಮಿತ್ರದಾಸ ರೈ ಡೆಕ್ಕಳ, ಪ್ರೇಮ್‌ರಾಜ್ ರೈ ಪರ್ಪುಂಜ, ಶರಣಾಕ್ಷಿ ಆಳ್ವ, ರಾಮಣ್ಣ ಗೌಡ ಪರನೀರು, ವೀರಪ್ಪ ಮೂಲ್ಯ ಬೈರಮೂಲೆ, ಕಸ್ತೂರಿ ಟಿ.ಶೆಟ್ಟಿ ಕೂರೇಲು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಶ್ಯಾಮ್ ಸುಂದರ ರೈ ಕೊಪ್ಪಳ ಸ್ವಾಗತಿಸಿ, ಉಪಾಧ್ಯಕ್ಷ ಸುಧಾಕರ ಆಳ್ವ ಕಲ್ಲಡ್ಕ ವಂದಿಸಿದರು. ಹಾಲು ಪರೀಕ್ಷಕಿ ಬೇಬಿ ಪರ್ಪುಂಜ ಸಹಕರಿಸಿದರು.
ಪ್ರೋತ್ಸಾಹಕ ಬಹುಮಾನಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದವರ ಪೈಕಿ ಕಿಶೋರ್ ಕುಮಾರ್ ಪ್ರಥಮ, ವಿನಯ ಕುಮಾರ್ ರೈ ದ್ವಿತೀಯ ಹಾಗೂ ಉಮೇಶ್ ಪೂಜಾರಿ ತೃತೀಯ ಬಹುಮಾನ ಪಡೆದುಕೊಂಡರು. ಶ್ಯಾಮಸುಂದರ ರೈ ಕೊಪ್ಪಳ, ಕುಸುಮಾ, ನಾರಾಯಣ ಪೂಜಾರಿ, ವೀರಪ್ಪ ಮೂಲ್ಯ, ಚಂದ್ರಶೇಖರ ರೈ, ರಾಜೇಶ್ ಶೆಟ್ಟಿ, ರಾಮಣ್ಣ ಗೌಡ, ಸದಾಶಿವ, ಗೀತಾ ರೈ ಅವರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.