

ಶಿರಸಿ: ಅಡಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗ ಎಲ್ಲೆಡೆ ತೀವ್ರವಾಗಿ ಬಾಧಿಸುತ್ತಿದೆ. ಇದರ ನಿಯಂತ್ರಣಕ್ಕೆ ಬಳಸುವ ಔಷಧ ಟ್ರೊಪಿಕೊನಾಲ್ ಅನ್ನು ರೈತರಿಗೆ ಶೇ. 75ರ ಸಹಾಯಧನದಲ್ಲಿ ವಿತರಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ 60 ಲಕ್ಷ ರೂ. ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ಹೇಳಿದರು.
ಇಲ್ಲಿತ ತಾಪಂ ಸಭಾಭವನದಲ್ಲಿ ಸೋಮವಾರ ಏರ್ಪಾಟಾಗಿದ್ದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಮೂರು ಮಾದರಿಯ ಎಲೆಚುಕ್ಕಿ ರೋಗ ಶಿರಸಿ ತಾಲೂಕಿನಲ್ಲಿ ಕಾಣಿಸಿಕೊಂಡಿದೆ. ಇವುಗಳಲ್ಲಿ ಸಣ್ಣ ಸಣ್ಣ ಹಳದಿವೃತ್ತ ಮತ್ತು ಕಪ್ಪು ಚುಕ್ಕೆ ಇರುವ ಮಾದರಿಯ ರೋಗ ಗಂಭೀರವಾಗಿದೆ. ಹಸಿರು ಗಿಡಗಳು ಎಲೆ ಒಣಗಿ ಸಾಯಲಾರಂಭಿಸಿವೆ. ಮಳೆ ಬಿಸಲಿನ ಮತ್ತು ವಾತಾವರಣದಲ್ಲಿ ಆದ್ರತೆಯ ಪ್ರಮಾಣ ಜಾಸ್ತಿ ಇರುವ ಈ ದಿನಗಳಲ್ಲಿ ಎಲೆಚುಕ್ಕಿ ರೋಗ ಅಧಿಕ ಪ್ರಮಾಣದಲ್ಲಿ ವಿಸ್ತರಣೆ ಆಗುತ್ತಿದೆ. ಈ ರೋಗ ನಿಯಂತ್ರಣಕ್ಕೆ ಅಡಕೆ ಗಿಡದ ಆರೋಗ್ಯ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ. ತೋಟದಲ್ಲಿ ಬಸಿಕಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅಗತ್ಯ ಪೋಷಕಾಂಶಗಳನ್ನು ಪೂರೈಸಬೇಕು ಎಂದರು.
ತಾಲೂಕಿನ ಹುಸುರಿ ಭಾಗದಲ್ಲಿ ಈಗ ಚೈನೀಸ್ ರಿಂಗ್ ಸ್ಪಾಟ್ ವೈರಸ್ ಕಂಡುಬಂದಿವೆ. ಅಡಕೆ ಗಿಡಗಳ ಎಲೆಗಳಲ್ಲಿ ಹಸಿರಿರುವಂತೆ ವೃತ್ತಗಳು ಮೂಡುತ್ತಿವೆ. ಇದು ಅತ್ಯಂತ ವೇಗವಾಗಿ ಹಬ್ಬುತ್ತಿದೆ. ಅಲ್ಲದೆ, ಯಾವ ಔಷಧ ಸೂಕ್ತ ಎಂಬುದು ಇನ್ನೂ ಶೋಧವಾಗಬೇಕಿದೆ. ಯಾವ ಕೀಟದಿಂದ ಈ ರೋಗ ಹರಡುತ್ತಿದೆ ಎಂಬುದು ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಡಕೆ ಬೆಳೆಗೆ ತೊಂದರೆ ನೀಡುತ್ತಿರುವ ಎಲ್ಲ ವಿಧದ ಕೀಟಗಳನ್ನು ನಾಶಪಡಿಸುವುದು ಇಂದಿರುವ ಪರಿಹಾರ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಭಟ್ ಕಣ್ಣಿ ಮಾತನಾಡಿ, ಕೆಎಫ್ಡಿ ಮಂಗನ ಕಾಯಿಲೆಗೆ ಈಗಾಗಲೇ ಮುಂಚಿತವಾಗಿ ಕ್ರಮ ಕೈಗೊಂಡಿದ್ದೇವೆ. ಕಳೆದ ವರ್ಷ 5 ಕೆಎಫ್ಡಿ ಪ್ರಕರಣಗಳು ಪತ್ತೆಯಾಗಿದ್ದವು ಅಲ್ಲದೆ, ಒಂದು ಸಾವೂ ಸಹ ಸಂಭವಿಸಿತ್ತು. ಈ ವರ್ಷ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಾವು ಈಗಿನಿಂದಲೇ ಮುಂಜಾಗ್ರತೆ ವಹಿಸಿ ಪರಿಶೀಲಿಸುತ್ತಿದ್ದೇವೆ. ಕಾಡಿನೆಡೆ ಕೆಲಸಕ್ಕೆ ತೆರಳುವವರಿಗೆ ಮೈಗೆ ಹಚ್ಚಿಕೊಳ್ಳುವ ಉಣ್ಣೆ ನಿರೋಧಕ ಎಣ್ಣೆಯ ವಿತರಣೆ ಕಾರ್ಯ ನಡೆಸಿದ್ದೇವೆ. ಅಗತ್ಯ ಪ್ರಮಾಣದ ಔಷಧ ಸಹ ದಾಸ್ತಾನು ಮಾಡಿಟ್ಟುಕೊಂಡಿದ್ದೇವೆ ಎಂದರು.
ತಾಲೂಕಿನಲ್ಲಿ ಈಗ ಡೆಂಘೆ ಜ್ವರ ಇಳಿಮುಖವಾಗಿದೆ. ನಾಯಿ ಕಚ್ಚಿದ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ವರ್ಷ ಇಲ್ಲಿಯವರೆಗೆ 1860 ಜನಕ್ಕೆ ನಾಯಿ ಕಚ್ಚಿದ್ದು, ಎಲ್ಲರಿಗೂ ಸೂಕ್ತ ಔಷಧ ನೀಡಿ ಗುಣರನ್ನಾಗಿಸಲಾಗಿದೆ. ಈ ವರ್ಷ 87 ಜನರಿಗೆ ಹಾವು ಕಚ್ಚಿದ್ದು, ಔಷಧ ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದೆ ಎಂದರು.
ಸಭೆಯ ನೇತೃತ್ವ ವಹಿಸಿದ್ದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಬಿ.ಪಿ. ಸತೀಶ ಮಾತನಾಡಿ, ಇಲಾಖೆಗಳ ಅನುದಾನ ವಾಪಸ್ ಹೋಗುವಂತಾಗಬಾರದು. ಅಧಿಕಾರಿಗಳು ಈಗಲೇ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಕಳೆದ ಅವಧಿಯಲ್ಲಿ ಕೃಷಿ ಇಲಾಖೆಯ ಅನುದಾನ ವಾಪಸಾಗಿದ್ದು, ಈ ವರ್ಷ ಮತ್ತೆ ಹಾಗಾದಂತೆ ನೋಡಿಕೊಳ್ಳಬೇಕು ಎಂದರು. ತಾಪಂ ಅಧಿಕಾರಿಗಳಾದ ಅಶೋಕ ನಾಯ್ಕ ಸೀತಾರಾಮ ನಾಯ್ಕ ಇತರರಿದ್ದರು.