ಶಿಕ್ಷಣಾಭಿಮಾನಿಗಳ ಬೆಂಬಲದಿಂದ ಸರ್ಕಾರಿ ಶಾಲೆ ಬೆಳವಣಿಗೆ

byn
Published on

ವಿಜಯವಾಣಿ ಸುದ್ದಿಜಾಲ ಬೈಂದೂರು ಶಿಕ್ಷಕರ ಆಸಕ್ತಿ ಮತ್ತು ಪಾಲಕರ ಪ್ರೋತ್ಸಾಹ ಶಿಕ್ಷಣಾಭಿಮಾನಿಗಳ ಬೆಂಬಲ ಇದ್ದಾಗ ಸರ್ಕಾರಿ ಶಾಲೆಗಳು ಉತ್ತಮವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಅನೇಕ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮುಂದಿನ ದಿನದಲ್ಲಿ ಸರ್ಕಾರದ ಮಟ್ಟದಲ್ಲಿ ದೊರೆಯುವ ಸಹಕಾರವನ್ನು ನಮ್ಮ ಗ್ರಾಮದ ಪ್ರೌಢಶಾಲೆಗೆ ದೊರಕಿಸಿಕೊಡಲಾಗುವುದು ಎಂದು ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ ಹೇಳಿದರು. ಕಿರಿಮಂಜೇಶ್ವರ ಗ್ರಾಪಂ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಮುಖ್ಯಶಿಕ್ಷಕ ಮಂಜು ಎಂ.ಪೂಜಾರಿ ಮಾತನಾಡಿ, ಗ್ರಾಪಂ ವತಿಯಿಂದ ನಮ್ಮ ಶಾಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಉತ್ತಮ ಶಿಕ್ಷಕರ ತಂಡ ಕೂಡ ನಮ್ಮ ಶಾಲೆಯಲ್ಲಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಅಂಕಗಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡುವುದಾಗಿ ಹೇಳಿದರು.

ಸನ್ಮಾನ

ಎಸ್‌ಡಿಎಂಸಿ ಅಧ್ಯಕ್ಷ ಈಶ್ವರ ಅಧ್ಯಕ್ಷತೆ ವಹಿಸಿದ್ದರು. 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕಿಂತ ಹೆಚ್ಚು ಅಂಕ ಪಡೆದ ನಾಲ್ಕು ವಿದ್ಯಾರ್ಥಿಗಳ ಪರವಾಗಿ ಅವರ ತಾಯಂದಿರನ್ನು ಹಾಗೂ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಮಂಜು ಎಂ.ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಕಾಲದಲ್ಲಿ ನರೇಗಾ ಯೋಜನೆಯಡಿ ಉತ್ತಮ ರೀತಿಯಲ್ಲಿ ಶಾಲಾ ಆವರಣ ಗೋಡೆಯನ್ನು ನಿರ್ಮಿಸಿದ ಗುತ್ತಿಗೆದಾರ ನಾರಾಯಣ ಟಿ.ಕೊಡೇರಿ ಅವರನ್ನು ಗೌರವಿಸಲಾಯಿತು.ಇಲಾಖೆಯ ನಿಯಮದಂತೆ ತೆರವುಗೊಂಡ ಎಸ್‌ಡಿಎಂಸಿಯ ಮೂರು ಸದಸ್ಯ ಸ್ಥಾನಕ್ಕೆ ಹೊಸ ಸದಸ್ಯರ ನೇಮಕ ಹಾಗೂ ನೂತನ ಅಧ್ಯಕ್ಷರಾಗಿ ಭಾಸ್ಕರ ಖಾರ್ವಿ ಅವರನ್ನು ಆಯ್ಕೆ ಮಾಡಲಾಯಿತು. ಗ್ರಾಪಂ, ಎಸ್‌ಡಿಎಂಸಿ ಸದಸ್ಯರು, ಪಿಡಿಒ, ಗ್ರಾಪಂ ಕಾರ್ಯದರ್ಶಿ ಇದ್ದರು. ಶ್ರೀಕಾಂತ್ ಬಿ., ಅನಿತಾ ನಿರೂಪಿಸಿದರು. ಮಂಜುನಾಥ ಕೆ.ಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net