ಕಡಬ: ಕಡಬ ತಾಲೂಕಿಗೆ ಸರ್ಕಾರಿ ಮೌಲಾನ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಮಂಜೂರಾತಿ ಆಗಿದೆ ಎಂದು ತಾ.ಪಂ.ಮಾಜಿ ಸದಸ್ಯ ಫಜಲ್ ಕೋಡಿಂಬಾಳ ತಿಳಿಸಿದ್ದಾರೆ.
42 ಗ್ರಾಮಗಳನ್ನೊಳಗೊಂಡ ಕಡಬ ತಾಲೂಕಿನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಪರಿಗಣಿಸಿ ವಿದ್ಯಾರ್ಥಿಗಳ ಉನ್ನತೀಕರಣಕ್ಕೆ ಮೌಲಾನ ಅಜಾದ್ ಆಂಗ್ಲ ಮಾಧ್ಯಮ ಶಾಲೆ ಬೇಡಿಕೆಯನ್ನು ಸಚಿವರಾದ ಜಮೀರ್ ಅಹ್ಮದ್ ಮತ್ತು ಸ್ಪೀಕರ್ ಯು.ಟಿ.ಖಾದರ್ ಮತ್ತು ಕಡಬದ ಜನಸ್ಪಂದನ ಸಭೆಯಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಲ್ಲಿಸಲಾಗಿತ್ತು, ಅದರ ಫಲವಾಗಿ ಇಂದು ಈ ಶಾಲೆ ಮಂಜೂರಾತಿ ಆಗಿದೆ. ಶಾಲೆಗೆ ಮುಖ್ಯಶಿಕ್ಷಕರ ನೇಮಕಾತಿ ಕೂಡ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 50 ಹೊಸ ಅಲ್ಪಸಂಖ್ಯಾತರ ಮೌಲಾನ ಅಜಾದ್ ಮಾದರಿ ಶಾಲೆಗಳನ್ನು ತೆರೆಯಲು ಸರ್ಕಾರ ಮಂಜೂರಾತಿ ನೀಡಿ, ಅಗತ್ಯ ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಲು ಆದೇಶ ನೀಡಿದೆ. ಮೌಲಾನ ಆಜಾದ್ ಶಾಲೆಗೆ 7ಹುದ್ದೆಗಳಂತೆ ಒಟ್ಟು 350 ಬೋಧಕ ಹುದ್ದೆಗಳನ್ನು ಸೃಜಿಸಲಾಗಿದ್ದು ಈ ಬಗ್ಗೆಯೂ ಆದೇಶ ನೀಡಲಾಗಿದೆ. ಈ ಪೈಕಿ ದ.ಕ.ಜಿಲ್ಲೆಯಲ್ಲಿ ಉಳ್ಳಾಲ, ಮಂಗಳೂರಿನ ಮಲ್ಲೂರು ಹಾಗೂ ಕಡಬದಲ್ಲಿ ಶಾಲೆ ಮಂಜೂರಾಗಿದೆ. ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಪ್ ಇಲಾಖೆಯ ಅಧೀನ ಕಾರ್ಯದರ್ಶಿ ನಾಗರಾಜ ಅವರು ಆದೇಶದಲ್ಲಿ ಪ್ರಕಟಿಸಿದ್ದಾರೆ.
ಮಧುಮೇಹ ಮಾರಕ ಕಾಯಿಲೆಯ ಮಾಹಿತಿ, ಜಾಗೃತಿ, ಮೂಡಿಸಿ ನಿಯಂತ್ರಿಸಿ ದಿನಾಚರಣೆ ಉದ್ಘಾಟಿಸಿ ಡಾ. ಮಹಮ್ಮದ್ ಇಸ್ಮಾಯಿಲ್ ಸಲಹೆ