ಕುಂದಾಪುರ: ಹುತಾತ್ಮ ಯೋಧ ಕೋಟೇಶ್ವರ ಬೀಜಾಡಿಯ ಅನೂಪ್ ಪೂಜಾರಿ ನಿವಾಸಕ್ಕೆ ಶನಿವಾರ ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮೃತ ಯೋಧ ಅನೂಪ್ ಪೂಜಾರಿಯವರ ಕುಟುಂಬ ಬಡತನದಲ್ಲಿದ್ದು ಸೂಕ್ತ ಪರಿಹಾರ ನೀಡಲು ಸರ್ಕಾರದ ಗಮನಕ್ಕೆ ತರಲಾಗುತ್ತಿದೆ. ಪತ್ನಿ ಪದವೀಧರೆಯಾಗಿದ್ದು ಅವರಿಗೆ ಸರ್ಕಾರಿ ನೌಕರಿ ಕೊಡಿಸುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಲಾಗುತ್ತದೆ. ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ತುರ್ತು ಗುತ್ತಿಗೆ ಆಧಾರದ ನೌಕರಿ ಕೊಡಿಸಿ ಮುಂದಿನ ದಿನದಲ್ಲಿ ಕಾಯಂ ಹುದ್ದೆ ನೇಮಕಾತಿ ಮಾಡಿಸುವ ಬಗ್ಗೆ ಕ್ರಮವಹಿಸಲಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮೃತ ಯೋಧನ ಕುಟುಂಬ ಆರ್ಥಿಕವಾಗಿ ಹಿಂದುಳಿದಿದೆ. ಮೃತರ ಪುಟ್ಟ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಬೀಜಾಡಿ, ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಬಿ.ಹೆರಿಯಣ್ಣ ಮೊದಲಾದವರಿದ್ದರು.
ಶಾಸಕ ಯಶ್‌ಪಾಲ್ ಭೇಟಿ
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹುತಾತ್ಮ ಯೋಧ ಅನೂಪ್ ಪೂಜಾರಿ ಅವರ ಪತ್ನಿ ಹಾಗೂ ಕುಟುಂಬಿಕರನ್ನು ಭೇಟಿ ಮಾಡಿ 1 ಲಕ್ಷ ರೂ. ಚೆಕ್ ಹಸ್ತಾಂತರಿಸಿದರು. ಸ್ಥಳಿಯ ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಬಿ.ಹಿರಿಯಣ್ಣ ಚಾತ್ರಬೆಟ್ಟು, ಮಲ್ಯಾಡಿ ಶಿವರಾಮ್ ಶೆಟ್ಟಿ, ಅಶೋಕ ಪೂಜಾರಿ ಬೀಜಾಡಿ, ಪ್ರಕಾಶ್ ಪೂಜಾರಿ ಬೀಜಾಡಿ, ಅವಿನಾಶ್ ಉಳ್ತೂರು, ಶೇಖರ ಚಾತ್ರಬೆಟ್ಟು, ಸದಾನಂದ ಶೆಟ್ಟಿ ಕೆದೂರು, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಸುರೇಂದ್ರ ಶೆಟ್ಟಿ ಸಹನಾ, ಯಾಸಿನ್ ಹೆಮ್ಮಾಡಿ, ಅನಿಲ್ ಚಾತ್ರಬೆಟ್ಟು, ಜಸಿಂತಾ ಡಿಮೆಲ್ಲೋ ಮುಂತಾದವರಿದ್ದರು.