

ಮುದ್ದೇಬಿಹಾಳ: ಬಡವರ ಆರೋಗ್ಯ ರಕ್ಷಣೆಗಾಗಿ ಸರ್ಕಾರಿ ಆಸ್ಪತ್ರೆಗಳು ವರದಾನವಾಗಿವೆ. ಬಡಜನರಿಗೆ ಅನುಕೂಲವಾಗು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಜನಪರ ಕಾಳಜಿ ತೋರಿಸುತ್ತಿದೆ ಎಂದು ಶಾಸಕ, ಕರ್ನಾಟಕ ಸಾಬೂನು, ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ ಹೇಳಿದರು.
ಇಲ್ಲಿನ ಮಹೆಬೂಬನಗರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಚ್ಚುವರಿಯಾಗಿ ಮಂಜೂರಾಗಿರುವ ನಮ್ಮ ಕ್ಲಿನಿಕ್ ಸೇವೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪುರಸಭೆ ನೆರವು ಪಡೆದು ಸರ್ಕಾರಿ ಆಸ್ಪತ್ರೆಗಳು ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶ್ರಮಿಸಬೇಕು. ನಮ್ಮ ಕ್ಲಿನಿಕ್ನಲ್ಲಿ 18 ರೀತಿಯ ಸೇವೆಗಳು ಲಭ್ಯವಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು. ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಉತ್ತಮ ಶಿಕ್ಷಣ ಕೊಡುವುದು ಸರ್ಕಾರದ ನಿಲುವಾದರೆ ಅವುಗಳನ್ನು ಪಡೆದುಕೊಳ್ಳುವ ಜಾಣ್ಮೆ ನಾಗರಿಕರಲ್ಲಿರಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್ ಗುಣಾರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ, ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ನಮ್ಮ ಕ್ಲಿನಿಕ್ನ ವೈದ್ಯಾಧಿಕಾರಿ ಡಾ. ಸ್ನೇಹಾ ಆಲಗೂರ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಣಿ ಅನುಸೂಯಾ ತೇರದಾಳ, ನಮ್ಮ ಕ್ಲಿನಿಕ್ ಸಿಬ್ಬಂದಿ, ಆ ಭಾಗದ ಆಶಾ ಕಾರ್ಯಕರ್ತೆಯರು, ಬಡಾವಣೆ ನಾಗರಿಕರು ಇದ್ದರು.