ಡ್ಯೂಟಿಗೆ ಹಾಜರಾಗಲು ಸರ್ಕಾರಿ ನೌಕರರಿಗೆ ಬುಲಾವ್​; ಗರ್ಭಿಣಿಯರಿಗೆ, ಅಂಗವಿಕಲರಿಗೆ ಮಾತ್ರ ವಿನಾಯಿತಿ

govt office
Published on

ಬೆಂಗಳೂರು : ರಾಜ್ಯದಲ್ಲಿ ಕರೊನಾ ನಿರ್ಬಂಧಗಳನ್ನು ಸಡಿಲೀಕರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗಲು ಬುಲಾವ್ ಬಂದಿದೆ. ಈವರೆಗೆ ಹಾಜರಾತಿಗೆ ವಿನಾಯಿತಿ ನೀಡಲಾಗಿದ್ದ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗಕ್ಕೆ ಕಡ್ಡಾಯ ಹಾಜರಾತಿ ಸೂಚನೆ ನೀಡಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಇಂದು ಸುತ್ತೋಲೆ ಹೊರಡಿಸಿದ್ದಾರೆ.

ಅತ್ಯಗತ್ಯ ಸೇವೆ ಒದಗಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಒಳಾಡಳಿತ, ಕಂದಾಯ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ.

ಈ ಏಳು ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಇಲಾಖೆಗಳಲ್ಲಿ, ಗ್ರೂಪ್​ ಎ ವೃಂದದ ಅಧಿಕಾರಿಗಳು ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಗ್ರೂಪ್ ಬಿ, ಸಿ ಮತ್ತು ಡಿ ವೃಂದದ ಅಧಿಕಾರಿಗಳು ಮತ್ತು ಸಿಬ್ಬಂದಿ ಶೇ. 50 ರಂತೆ ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನಿರ್ದೇಶಿಸಲಾಗಿದೆ. ಈ ಸುತ್ತೋಲೆಯು ಜೂನ್ 30 ರವರೆಗೆ ಜಾರಿಯಲ್ಲಿರುತ್ತದೆ ಎನ್ನಲಾಗಿದೆ.

ಸರತಿಯ ಕಾರಣದಿಂದ ವಿನಾಯಿತಿ ಲಭ್ಯವಾಗಿದ್ದರೂ, ಎಲ್ಲಾ ವರ್ಗದ ನೌಕರರು, ಇಲಾಖಾ ಮುಖ್ಯಸ್ಥರು ಅವಶ್ಯಕವೆಂದು ಸೂಚಿಸಿದಲ್ಲಿ ಅಥವಾ ಕೋವಿಡ್​ ಕರ್ತವ್ಯಕ್ಕೆ ನಿಯೋಜಿಸಿದಲ್ಲಿ ತಪ್ಪದೇ ಕರ್ತವ್ಯಕ್ಕೆ ಹಾಜರಾಗಬೇಕು. ಕೇಂದ್ರ ಸ್ಥಾನದಲ್ಲೇ ಸಿದ್ಧರಾಗಿರಬೇಕು ಎಂದು ಸೂಚಿಸಲಾಗಿದೆ. ಅಂಗವೈಕಲ್ಯ ಹೊಂದಿದ ನೌಕರರಿಗೆ ಮತ್ತು ಗರ್ಭಿಣಿಯರಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net