

ಕುಂದಾಪುರ: ಗಂಗೊಳ್ಳಿ-ಬೈಂದೂರು ನಡುವೆ ನೇರ ಬಸ್ ಸಂಪರ್ಕ ಇಲ್ಲ. ಹೀಗಾಗಿ ಗಂಗೊಳ್ಳಿ-ಬೈಂದೂರು ನಡುವೆ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು. ಗಂಗೊಳ್ಳಿ-ಕುಂದಾಪುರ ನಡುವೆ ಮಿನಿ ಸರ್ಕಾರಿ ಬಸ್ ನೀಡುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ವಯೋವೃದ್ಧರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಆದ್ದರಿಂದ ಈ ಭಾಗಕ್ಕೆ ಮಿನಿ ಬಸ್ ನೀಡಬಾರದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವೇಳಾಪಟ್ಟಿ ಪುನರ್ ನಿಗದಿಪಡಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಜಹೀರ್ ಅಹಮ್ಮದ್ ಆಗ್ರಹಿಸಿದರು. ಕುಂದಾಪುರದ ತಾಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಕುಂದಾಪುರದ ಸಮೀಪದ ಹೇರಿಕುದ್ರು ಎಂಬಲ್ಲಿ ಸರಕಾರಿ ಬಸ್ ನಿಲುಗಡೆ ಮಾಡುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಬಸ್ ನಿಲುಗಡೆ ನೀಡುತ್ತಿಲ್ಲ ಎಂದು ಸದಸ್ಯ ಅಭಿಲಾಷ್ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು. ಹಕ್ಲಾಡಿ-ನೂಜಾಡಿ ಭಾಗದಲ್ಲಿ ಖಾಸಗಿ ಬಸ್ ಸಂಚಾರ ವಿರಳವಾಗಿದ್ದು, ಈ ಭಾಗದಲ್ಲಿ ಸರ್ಕಾರಿ ಬಸ್ ಸಂಚಾರ ಪ್ರಾರಂಭಿಸಬೇಕು ಎಂದು ಸದಸ್ಯ ಚಂದ್ರ ಕಾಂಚನ್ ಆಗ್ರಹಿಸಿದರು. ಕೊಲ್ಲೂರು-ಮೈಸೂರು ನಡುವೆ ಸ್ಥಗಿತಗೊಂಡಿರುವ ಬಸ್ ಸಂಚಾರ ಪುನರಾರಂಭಿಸಲು ಕ್ರಮಕೈಗೊಳ್ಳಿ ಎಂದು ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಸೂಚಿಸಿದರು. ಕುಂದಾಪುರದ ಶಾಸ್ತ್ರೀ ಪಾರ್ಕ್ ಸಮೀಪ ಸರಕಾರಿ ಬಸ್ ನಿಲ್ಲಿಸಲು ಸ್ಥಳ ಗುರುತಿಸಿ ಅಲ್ಲಿ ನಾಮಫಲಕ ಅಳವಡಿಸಲು ಕ್ರಮಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಹೇಳಿದರು. ಈ ಸಂದರ್ಭದಲ್ಲಿ ಯುವನಿಧಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ಸದಸ್ಯರಾದ ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲೋ, ನಾರಾಯಣ ಆಚಾರ್, ಗಣೇಶ್, ಕೆ.ಪ್ರದೀಪ ಕುಮಾರ್ ಶೆಟ್ಟಿ, ಅರುಣ್, ಹರ್ಷ ಶೆಟ್ಟಿ, ಸವಿತಾ ಪೂಜಾರಿ, ಮಂಜು ಕೊಠಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮೊದಲಾದವರು ಇದ್ದರು.
ಅರಣ್ಯ ಇಲಾಖೆಯವರು ವಿದ್ಯುತ್ ತಂತಿಗಳ ಮೇಲಿರುವ ಅಕೇಶಿಯಾ ಮರಗಳನ್ನು ತೆರವುಗೊಳಿಸುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಹಾಲಾಡಿ-ಶಂಕರನಾರಾಯಣ ಭಾಗದಲ್ಲಿ ವಿದ್ಯುತ್ ತಂತಿಗಳ ಕೆಳಗೆ ಗಿಡಗಳನ್ನು ನೆಟ್ಟಿದ್ದಾರೆ ಎಂದು ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹೇಳಿದರು. ಮೆಸ್ಕಾಂ ಗುರುತು ಮಾಡಿದಷ್ಟು ಮರಗಳನ್ನು ಅರಣ್ಯ ಇಲಾಖೆಯವರು ಕಡಿಯುತ್ತಿಲ್ಲ, ಅವರ ಸಹಕಾರ ಸಿಗುತ್ತಿಲ್ಲ ಎಂದು ಮೆಸ್ಕಾಂ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.