ಕಂದಕಕ್ಕೆ ಉರುಳಿದ ಸರ್ಕಾರಿ ಬಸ್: ​7 ಜನ ಬಲಿ, 20 ಮಂದಿಗೆ ಗಾಯ! | Bus Accident

HIMACHAL PRADESH
Published on

Bus Accident: ಸರ್ಕಾರಿ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 7 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.

ಬಸ್ ಸರ್ಕಾಘಾಟ್‌ನಿಂದ ದುರ್ಗಾಪುರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಾಯಾಳುಗಳು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಮಂಡಿ ಎಸ್ಪಿ ಸಾಕ್ಷಿ ವರ್ಮಾ ಮಾಹಿತಿ ನೀಡಿದ್ದಾರೆ.

ಭೀಕರ ಅಪಘಾತದ ಬಗ್ಗೆ ಎಕ್ಸ್​ ಹಂಚಿಕೊಂಡಿರುವ ಹಿಮಾಚಲ ಪ್ರದೇಶದ ಸಿಎಂ ಸುಖವಿಂದರ್ ಸಿಂಗ್ ಸುಖು, ''ಬಸ್ ಕಂದಕಕ್ಕೆ ಬಿದ್ದು 7 ಜನರು ಮೃತಪಟ್ಟಿರುವ ಘಟನೆ ಸುದ್ದಿ ಕೇಳಿ ಹೃದಯ ವಿದ್ರಾವಕವಾಗಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಅವರ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ" ಎಂದಿದ್ದಾರೆ.

"ದುಃಖದ ಈ ಸಮಯದಲ್ಲಿ, ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಎಲ್ಲಾ ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂಬುದು ನನ್ನ ಹಾರೈಕೆ" ಎಂದಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net