ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳೆಕಾಲದ ಸರ್ಕಾರಿ ಕಟ್ಟಡಗಳು ನೆಲಕಚ್ಚುವ ಭೀತಿಯಲ್ಲಿವೆ. ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅನೇಕ ಕಟ್ಟಡಗಳು ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಶಿಥಿಲಾವಸ್ಥೆ ತಲುಪಿವೆ.

ಗಂಗೊಳ್ಳಿಯ ಕೆಎಫ್‌ಡಿಸಿ ಐಸ್ ಪ್ಲಾಂಟ್ ಎದುರು ಇರುವ ಮೀನುಗಾರಿಕಾ ಇಲಾಖೆ ಕಟ್ಟಡ ಮತ್ತು ವ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿರುವ ಬಂದರು ಇಲಾಖೆಗೆ ಸೇರಿದ ಶೆಡ್‌ಗಳು ನಿರ್ವಹಣೆ ಕೊರತೆಯಿಂದ ಸಂಪೂರ್ಣ ಪಾಳು ಬಿದ್ದಂತಾಗಿದೆ. ಈ ಕಟ್ಟಡದ ಸುತ್ತಲೂ ದೊಡ್ಡ ದೊಡ್ಡ ಗಿಡಗಂಟಿಗಳು ಬೆಳೆದು ನಿಂತಿದ್ದು ಕಟ್ಟಡಗಳು ಭೂತ ಬಂಗಲೆಯಂತಾಗಿವೆ. ಕಟ್ಟಡದ ಮೇಲ್ಛಾವಣಿಯೂ ಕುಸಿಯುವ ಹಂತಕ್ಕೆ ತಲುಪಿದೆ. ಸಂಜೆ ಬಳಿಕ ಸೊಳ್ಳೆ ಕಾಟ ಹೆಚ್ಚಾಗಿದ್ದು, ಗಿಡಮರಗಳನ್ನು ಕಡಿಯುವಂತೆ ಬಂದರು ಇಲಾಖೆ ಅಧಿಕಾರಿಗಳನ್ನು ವಿನಂತಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಅನುದಾನ ಕೊರತೆ: ಕಟ್ಟಡ ನಿರ್ವಹಣೆಗೆ ಇಲಾಖೆಯಿಂದ ಅನುದಾನ ದೊರೆಯುತ್ತಿಲ್ಲ. ಹೀಗಾಗಿ ಕಟ್ಟಡ ದುರಸ್ತಿಗೆ ಇಲಾಖೆ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಟ್ಟಡದ ನಿರ್ವಹಣೆ ಅನುದಾನ ಸ್ಥಗಿತಗೊಂಡಿದೆ. ಕಟ್ಟಡಗಳನ್ನು ಉಪಯೋಗಿಸದ ಕಾರಣ ಕಟ್ಟಡದ ಬಾಗಿಲು, ಕಿಟಕಿಗಳು ಸಂಪೂರ್ಣ ಹಾಳಾಗಿವೆ.
ಉಪಯೋಗಕ್ಕಿಲ್ಲದ ಪಾಳುಬಿದ್ದಿರುವ ಕಟ್ಟಡಗಳ ಪೈಕಿ ಹಲವು ಕಟ್ಟಡಗಳು ಅಪಾಯಕಾರಿ ಎನಿಸಿವೆ. ಇಂತಹ ಅಪಾಯಕಾರಿ ಕಟ್ಟಡಗಳ ತೆರವುಗೊಳಿಸಬೇಕು ಇಲ್ಲವಾದಲ್ಲಿ ಸದುದ್ದೇಶಕ್ಕೆ ಬಳಕೆ ವಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅನುದಾನದ ಕೊರತೆಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿವೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಕಟ್ಟಡಗಳ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.