

ಬೆಂಗಳೂರು: ವ್ರಜವಾಸಿಗಳನ್ನು ರಕ್ಷಿಸಲು ಶ್ರೀಕೃಷ್ಣ ಗೋವರ್ಧನ ಬೆಟ್ಟವನ್ನು ಎತ್ತಿದ ದಿವ್ಯಲೀಲೆಯ ಸ್ಮರಣಾರ್ಥವಾಗಿ ಕಾರ್ತಿಕ ಮಾಸದಲ್ಲಿ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಅಂತೆಯೇ ಇಸ್ಕಾನ್ ದೇವಾಲಯದಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗೋವರ್ಧನ ಪೂಜೆಯ ಪ್ರಯುಕ್ತ ರಾಜಾಜಿನಗರದ ಇಸ್ಕಾನ್ ಗೋವರ್ಧನ ಗಿರಿಯಲ್ಲಿ ಭಕ್ತರು ಗೋವರ್ಧನ ಗಿರಿಯ ಪ್ರತಿರೂಪವೊಂದನ್ನು ನಿರ್ಮಿಸಿ ಅದರ ಸುತ್ತ ವಿವಿಧ ಖಾದ್ಯ ತಿನಿಸುಗಳನ್ನು ಜೋಡಿಸಿ ಭಗವಂತನಿಗೆ ಅರ್ಪಿಸಿದರು. ಆನಂತರ ಎಲ್ಲಾ ಭಕ್ತರಿಗೆ ಭಗವಂತನಿಗೆ ಅರ್ಪಿಸಿದ ವಿವಿಧ ಭೋಜ್ಯಗಳನ್ನು ನೆರೆದಿರುವ ವಿತರಿಸಲಾಯಿತು. ಗೋವುಗಳನ್ನು ಅಲಂಕರಿಸಿ, ಗೋವುಗಳ ರಕ್ಷಕ ಗೋಪಾಲನಿಗೆ ಆರತಿ ಮಾಡಲಾಯಿತು. ಗೋವುಗಳನ್ನು ಮುಂದಿಟ್ಟುಕೊಂಡು ಭಕ್ತರು ಗೋವರ್ಧನ ಗಿರಿಗೆ ಪ್ರದಕ್ಷಿಣೆ ಮಾಡಿದರು. ಭಕ್ತರು ಶ್ರೀ ಗೋವರ್ಧನಾಷ್ಟಕಂ, ಯಶೋಮತಿ ನಂದನ ಮತ್ತಿತರ ಹಾಡುಗಳನ್ನು ಹೇಳಿ ಕೃಷ್ಣ ಬಲರಾಮನಿಗೆ ಆರತಿ ಮಾಡಿದರು. ಇದೇ ವೇಳೆ ದೇವಾಲಯದಲ್ಲಿ ದಾಮೋದರಷ್ಟಕ ಭಜನೆಯ ಜೊತೆಗೆ ದೀಪೋತ್ಸವ ನಡೆಯಿತು.