ಭಾರತ ಕರೊನಾ ವೈರಸ್​ನಿಂದ ಪಾರಾಗುವ ದಿನ ದೂರ ಇಲ್ಲ..! ಇಲ್ಲೊಂದು ಗುಡ್​ ನ್ಯೂಸ್​ ಇದೆ ನೋಡಿ...

Coronavirus 19 April 20
Published on

ನವದೆಹಲಿ: ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕರೊನಾ ವೈರಸ್​ ಪ್ರಸರಣ ಹೆಚ್ಚುತ್ತಲೇ ಇದೆ.
ಭಾರತದಲ್ಲಿ ಸೋಂಕಿತರ ಸಂಖ್ಯೆ 15,000ದ ಗಡಿ ದಾಟಿದ್ದು, ಸಾವಿನ ಸಂಖ್ಯೆ 507ಕ್ಕೆ ಏರಿದೆ. ಎಲ್ಲ ರಾಜ್ಯಗಳಲ್ಲೂ ಕರೊನಾ ಅಟ್ಟಹಾಸ ತೋರಿಸುತ್ತಿದೆ. ಹೀಗಿದ್ದರೂ ಒಂದು ಸಮಾಧಾನಕರ ಸಂಗತಿ ಬೆಳಕಿಗೆ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದೇ ನಮಗೆಲ್ಲ ಶುಭಸುದ್ದಿ.

ಭಾರತದಲ್ಲಿ ಕರೊನಾ ವೈರಸ್​ ಹರಡುವಿಕೆ ಪ್ರಮಾಣ ನಿರಂತರವಾಗಿ ಕುಸಿಯುತ್ತಿದೆ. ಕಳೆದ 5 ದಿನಗಳಲ್ಲಿ ದೇಶದಲ್ಲಿ ಕರೊನಾ ಸೋಂಕಿನ ಬೆಳವಣಿಗೆ ದರ ಶೇ.6.6. ಈ ದರ ಮೊದಲು ಶೇ.8 ಇತ್ತು. ಅಮೆರಿಕದ ಸಂಶೋಧನಾ ಯೂನಿವರ್ಸಿಟಿ ಜಾನ್ಸ್​ ಹಾಪ್ಕಿನ್ಸ್​​ನ CSSEಯ ವರದಿ ಈ ಮಾಹಿತಿ ನೀಡಿದೆ.

ಕರೊನಾ ವೈರಸ್​ ಹೆಚ್ಚಳವಾಗುತ್ತಿದ್ದರಿಂದ ಭಾರತದಲ್ಲಿ ಮಾ.21ರಿಂದ ಏ.14ರವರೆಗೆ ಮೊದಲ ಹಂತದ ಲಾಕ್​ಡೌನ್​ ಮಾಡಲಾಗಿತ್ತು. ಆದರೆ ಅದು ಅಷ್ಟು ಪರಿಣಾಮಕಾರಿಯಾಗದ ಕಾರಣ ಮತ್ತೊಂದು ಹಂತಕ್ಕೆ ಅಂದರೆ ಮೇ 3ರವರೆಗೆ ಲಾಕ್​ಡೌನ್​ ವಿಸ್ತರಿಸಲಾಗಿದೆ.

ಕಳೆದ ಕೆಲವೇ ದಿನಗಳ ಹಿಂದೆ ಭಾರತದಲ್ಲಿ ಸಕ್ರಿಯ ಕರೊನಾ ಸೋಂಕಿತರ ಸಂಖ್ಯೆ 8 ದಿನಕ್ಕೊಮ್ಮೆ ದ್ವಿಗುಣಗೊಳ್ಳುತ್ತಿತ್ತು. ಈಗ ಕಳೆದ ಐದು ದಿನಗಳಿಂದ 11ದಿನಕ್ಕೊಮ್ಮೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.

ಹಾಗೇ ಇಲ್ಲಿಯವರೆಗೆ ತಪಾಸಣೆಗೆ ಒಳಪಡಿಸಿದವರಲ್ಲಿ ಶೇ.4.4ರಷ್ಟು ಜನರಲ್ಲಿ ಮಾತ್ರ ಕರೊನಾ ಸೋಂಕು ದೃಢಪಟ್ಟಿದೆ ಎಂದು ದೆಹಲಿಯಲ್ಲಿರುವ ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ ನೀಡಿರುವ ವರದಿಯಲ್ಲಿ ಹೇಳಲಾಗಿದೆ.
ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿರುವ ಪ್ರೊಫೆಸರ್​ ಶಮಿಕಾ ರವಿ ಅವರು ಡಾಟಾವನ್ನು ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net