

ಶಿವಮೊಗ್ಗ: ನೀಟ್‌ಗೆ ಸಂಬಂಧಿಸಿದಂತೆ ರಾಜ್ಯದ ಆಯ್ದ ಕಾಲೇಜುಗಳಲ್ಲಿ ಸರ್ಕಾರದಿಂದಲೇ ಉಚಿತ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಪ್ರಸ್ತುತ ನೀಟ್ ಪರೀಕ್ಷೆ ಫಲಿತಾಂಶ ಹೊರಬಿದ್ದ ಬಳಿಕ ಸಾಕಷ್ಟು ಅನುಮಾನ ಮತ್ತು ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು. ಇದೀಗ ಮರು ಪರೀಕ್ಷೆ ನಿಗದಿ ಮಾಡಿರುವುದರಿಂದ ರಾಜ್ಯ ಸರ್ಕಾರವೇ ನುರಿತ ಉಪನ್ಯಾಸಕರಿಂದ ಉಚಿತವಾಗಿ ತರಬೇತಿ ನೀಡಲು ಮುಂದಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೀಟ್ ಪರೀಕ್ಷೆಯಲ್ಲಿ ಆಗಿರುವ ಅದ್ವಾನದಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ರೀತಿಯ ಗೊಂದಲಗಳಿಗೆ ಇತಿಶ್ರೀ ಹಾಡಬೇಕಿದೆ. ನೀಟ್ ವ್ಯವಸ್ಥೆಯ ಬಗ್ಗೆಯೇ ಕೂಲಂಕಷ ಚರ್ಚೆಯಾಗಬೇಕಿದೆ. ವೃತ್ತಿಪರ ಕೋರ್ಸ್‌ಗಳಿಗೆ ಎಲ್ಲ ಮೂಲಸೌಕರ್ಯ ನೀಡುವುದು ರಾಜ್ಯ ಸರ್ಕಾರಗಳಾಗಿವೆ. ಆದರೆ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಾಮಮಾರ್ಗದಲ್ಲಿ ಸೀಟ್ ಪಡೆಯುವುದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಎಂದರು.
ತಮಿಳುನಾಡು ಸರ್ಕಾರ ಈ ಬಗ್ಗೆ ಮೊದಲಿಂದಲೂ ಧ್ವನಿ ಎತ್ತಿದೆ. ನಮ್ಮ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ವೈಫಲ್ಯವನ್ನು ನಾವು ಖಂಡಿಸುತ್ತೇವೆ ಎಂದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸರ್ಕಾರಿ ಶಾಲೆಗಳಿಗೆ ಸಕಾಲಕ್ಕೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ನೀಡಲಾಗುತ್ತಿದೆ. ಮೂರು ಪರೀಕ್ಷೆಗಳನ್ನು ನಡೆಸಲಾಗುತಿದ್ದು, ಉತ್ತೀರ್ಣರಾಗುವ ಎಲ್ಲರಿಗೂ ಕಾಲೇಜಿನಲ್ಲಿ ಪ್ರವೇಶ ಸಿಗಲಿದೆ. ತಡವಾಗಿ ಸೇರುವ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್ ಮೂಲಕ ಪಾಠ ಮಾಡಲಾಗುವುದು. ಅತಿಥಿ ಶಿಕ್ಷಕರನ್ನು ಈಗಾಗಲೇ ನೇಮಕ ಮಾಡಿದ್ದು, 13 ಸಾವಿರ ಕಾಯಂ ಶಿಕ್ಷಕರು ನೇಮಕವಾಗಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 5 ಸಾವಿರ ಶಿಕ್ಷಕರ ನೇಮಕ ಆಗಿತ್ತು ಎಂದು ಸಚಿವರು ಹೇಳಿದರು.
1,900 ಅನಧಿಕೃತ ಶಾಲೆ ಗುರುತು: ರಾಜ್ಯದಲ್ಲಿ ಸುಮಾರು 1,900 ಅನಧಿಕೃತ ಶಾಲೆಗಳನ್ನು ಸರ್ಕಾರ ಗುರುತಿಸಿದೆ. ಕಾನೂನು ಉಲ್ಲಂಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಈಗಿರುವ ನಿರ್ಬಂಧವನ್ನು ಸಡಿಲಿಸಲು ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ 600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 11 ಶಾಲೆಗಳಿದ್ದು, 41 ಶಾಲೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.