

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರ, ಅದರ ಭಾಗವಾಗಿ ಇದೇಶೈಕ್ಷಣಿಕ ಸಾಲಿನಿಂದ (2025-26) ಅನ್ವಯವಾಗುವಂತೆ ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಸ್ತುತ ಬೋಧಿಸುತ್ತಿರುವ ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಆರಂಭಿಸಲು ಆದೇಶ ಹೊರಡಿಸಿದೆ.
2025-26ನೇ ಸಾಲಿನ ಬಜೆಟ್ನಲ್ಲಿ ೋಷಿಸಿದ್ದಂತೆ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಈ ವರ್ಷ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ.
ರಾಜ್ಯದಲ್ಲಿ 2019-20ನೇ ಸಾಲಿನಿಂದ ರಾಜ್ಯದಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಯಿತು. ಬಳಿಕ 2024-25ನೇ ಸಾಲಿನಲ್ಲಿ 1,792 ಶಾಲೆಗಳನ್ನು ಆಂಗ್ಲ ಮಾಧ್ಯಮ ತರಗತಿಗಳಿಗೆ ಅನುಮತಿ ನೀಡಿರುವುದು ಸೇರಿ ಇಲ್ಲಿಯವರೆಗೆ ಸರ್ಕಾರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ಪಿಎಂಶ್ರೀ ಶಾಲೆಗಳು ಸೇರಿ ಒಟ್ಟು 4,404 ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಆರಂಭಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿಯೇ 1,465 ಶಾಲೆಗಳಿವೆ.
ಆಯ್ಕೆಗೆ ಮಾನದಂಡಗಳೇನು?
- ಹೊಸದಾಗಿ ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ನೀಡಲು ಪ್ರತಿ ತಾಲ್ಲೂಕು/ವಲಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಯನ್ನು ಹೊಂದಿರುವ ಶಾಲೆಗಳ ಪೈಕಿ ಮೊದಲ 15 ಶಾಲೆಗಳನ್ನು ಪರಿಗಣಿಸಲಾಗಿದೆ.
- ಒಂದು ವೇಳೆ ತಾಲ್ಲೂಕು/ವಲಯದಲ್ಲಿ ಇಂತಹ 15 ಶಾಲೆಗಳು ಲಭ್ಯವಿಲ್ಲದಿದ್ದಲ್ಲಿ ಎಲ್ಲ ಶಾಲೆಗಳನ್ನು ಪರಿಗಣಿಸುವಂತೆ ಸೂಚಿಸಲಾಗಿದೆ.
- ಅಗತ್ಯ ಸಂಪನ್ಮೂಲಗಳನ್ನು ಹೊಂದಿರಬೇಕು. ಶಾಲಾ ಶಿಕ್ಷಕರ ಹುದ್ದೆಗಳ ಹೆಚ್ಚುವರಿ ಪ್ರಕ್ರಿಯೆ ಚಾಲೆನೆಯಲ್ಲಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರನ್ನು ಒದಗಿಸುವಂತೆ ಸೂಚಿಸಲಾಗಿದೆ.
- ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸುವುದರಿಂದ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಆರ್ಥಿಕ ಹೊರೆಯಾಗುವುದಿಲ್ಲ ಎಂಬುದನ್ನು ತಿಳಿಸಿದೆ.
ಪ್ರೌಢಶಾಲೆಯಲ್ಲಿಯೂ ಆಂಗ್ಲ ಮಾಧ್ಯಮ
ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಜತೆಗೆ ಆಂಗ್ಲ ಭಾಷೆಯ ಕೌಶಲ ಬೆಳೆಸಲು ಆರಂಭಿಸಲಾಗುತ್ತಿದೆ. ಮೂಲಸೌಕರ್ಯ, ಸುಸಜ್ಜಿತ ಕಟ್ಟಡ, ಪೀಠೋಪಕರಣ ಹಾಗೂ ಶಿಕ್ಷಕರು ಲಭ್ಯವಿರುವ ಹಾಗೂ ಸರ್ಕಾರಿ ಆಂಗ್ಲ ಮಾಧ್ಯಮ, ಹಿರಿಯ ಪ್ರಾಥಮಿಕ ಶಾಲೆಗಳು ಇರುವುದರಿಂದ ಆಂಗ್ಲ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ನೀಡುವ ಉದ್ದೇಶದಿಂದ ಶಿವಮೊಗ್ಗೆ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ, ಬಿಳಲುಕೊಪ್ಪ ಸರ್ಕಾರಿ ಪ್ರೌಢಶಾಲೆ, ಹೊಸೂರು-ಗುಡ್ಡಕೇರಿ ಮತ್ತು ಹೆದ್ದೂರು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು 2025-26ನೇ ಸಾಲಿನಲ್ಲಿ ಆರಂಭಿಸಲು ಅನುಮತಿ ನೀಡಲಾಗಿದೆ.
ಆಂಗ್ಲ ಮಾಧ್ಯಮ ಬೋಧನೆ ಮಾಡಲು ಅವಶ್ಯವಿರುವ ಶಿಕ್ಷಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಜು.31ರವರೆಗೂ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಸಂಬಂಧಪಟ್ಟ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಿಕೊಳ್ಳಬಹುದು. - ಡಾ. ಕೆ.ವಿ. ತ್ರಿಲೋಕಚಂದ್ರ, ಆಯುಕ್ತ, ಶಾಲಾ ಶಿಕ್ಷಣ ಇಲಾಖೆ