

ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲೇ ವಿದ್ಯುತ್ ಬಳಕೆದಾರರಿಗೆ ಕರ್ನಾಟಕ ರಾಜ್ಯ ವಿದ್ಯುತ್ಚ್ಛಕ್ತಿ ನಿಯಂತ್ರಣ ಆಯೋಗ ಗುಡ್ ನ್ಯೂಸ್ ನೀಡಿದೆ.
ಗೃಹ ಬಳಕೆಯಲ್ಲಿ 100 ಯುನಿಟ್ ಗಿಂತ ಹೆಚ್ಚು ವಿದ್ಯುತ್ಬಳಕೆ ಮಾಡುವವರಿಗೆ ಪ್ರತಿ ಯುನಿಟ್ಗೆ 1.10 ರೂ. ಕಡಿಮೆ ಮಾಡಲಾಗಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಈ ಪರಿಷ್ಕೃತ ದರ ಏಪ್ರಿಲ್ 1 ರಿಂದಲೇ ಜಾರಿಯಾಗಿದ್ದು, ಎಲ್ಲ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್ ದರ ನಿಗದಿ ಮಾಡಲಾಗಿದೆ.
100ಕ್ಕಿಂತ ಹೆಚ್ಚು ಯುನಿಟ್ ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್ಗೆ 7 ರೂ. ನಿಗದಿ ಮಾಡಲಾಗಿತ್ತು. ಆದರೆ ಇದೀಗ ಪ್ರತಿ ಯುನಿಟ್ಗೆ 5.90 ರೂ. ಮಾತ್ರ ಶುಲ್ಕ ವಿಧಿಸಲಾಗಿದೆ. ಇನ್ನು 100 ಯುನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರು ಈಗಾಗಲೆ ಪ್ರತಿ ಯುನಿಟ್ಗೆ 4.75 ರೂ. ಪಾವತಿಸುತ್ತಿದ್ದಾರೆ.
ವಿದ್ಯುತ್ ದರ ಕಡಿತದ ಬಿಲ್ ಏಪ್ರಿಲ್ ನಲ್ಲಿ ಬರುವ ಬಿಲ್ ನಲ್ಲಿ ಬರುವುದಿಲ್ಲ, ಮೇ ತಿಂಗಳಿನಲ್ಲಿ ಬರುವ ಬಿಲ್ ನಲ್ಲಿ ಈ ದರ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.