

ಬೆಂಗಳೂರು: ಭಕ್ತರೇ, ದೇವಸ್ಥಾನದಲ್ಲಿ ಕ್ಷೀರಾಭಿಷೇಕ, ಕುಂಕುಮಾರ್ಚನೆ, ತುಲಾಭಾರ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಉರುಳು ಸೇವೆ, ಮುಡಿ ಸೇವೆ... ಸೇರಿದಂತೆ ಇನ್ನಿತರ ಸೇವೆಗಳನ್ನು ನೆರವೇರಿಸಲು ಆಗುತ್ತಿಲ್ಲ ಎಂಬ ಚಿಂತೆ ನಿಮ್ಮಲ್ಲಿದ್ರೆ ಅದನ್ನು ಈಗಲೇ ಬಿಟ್ಬಿಡಿ. ಯಾಕಂದ್ರೆ ಆ ಎಲ್ಲ ಸೇವೆ ಸಲ್ಲಿಸಲು ಶೀಘ್ರದಲ್ಲೇ ನಿಮಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ!
ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ಸಾರ್ವಜನಿಕರ ಪ್ರವೇಶ ನಿಷಿದ್ಧ ಮಾಡಲಾಗಿತ್ತು. ಇದೀಗ ದರ್ಶನಕ್ಕೆ ಅವಕಾಶ ಇದೆಯಾದರೂ ಮೇಲಿನ ಸೇವೆಗಳಿಗೆ ಅನುಮತಿ ಇರಲಿಲ್ಲ. ಸೀಮಿತ ಸೇವೆಗಳಿಗಷ್ಟೇ ಅವಕಾಶ ಕೊಡಲಾಗಿತ್ತು. ಇದೀಗ ಅನ್ಲಾಕ್ ಪ್ರಕ್ರಿಯೆ ಜಾರಿ ಆಗುತ್ತಿದ್ದು, ದೇವಸ್ಥಾನಗಳಲ್ಲಿ ಎಲ್ಲ ಸೇವೆಗೂ ಅವಕಾಶ ನೀಡಲು ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಿದ್ಧತೆ ನಡೆಸಿದೆ.
ಇದನ್ನೂ ಓದಿರಿ ಕೊಹ್ಲಿ ಅಪ್ಪನಾಗಿದ್ದಕ್ಕೆ ಸಿಹಿ ಹಂಚಲು ಮುಂದಾದ ಜೊಮ್ಯೊಟೋ..!
ಕರೊನಾ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಕೆ ಮಾಡುತ್ತಿರುವ ಕಾರಣ ದೇವಸ್ಥಾನಗಳಲ್ಲಿ ಸೇವೆಗೆ ಅವಕಾಶ ನೀಡಬೇಕು ಎಂದು ಸಾರ್ವಜನಿಕರು ಮತ್ತು ಅರ್ಚಕರಿಂದ ಒತ್ತಾಯ ಕೇಳಿ ಬರುತಿತ್ತು. ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಶ್ರೀವತ್ಸ ನೇತೃತ್ವದ ನಿಯೋಗವು ಸಚಿವರನ್ನು ಗುರುವಾರ ಭೇಟಿ ಮಾಡಿ ಮನವಿ ಮಾಡಿತು.
ಈ ಕುರಿತು 'ವಿಜಯವಾಣಿ'ಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮುಜರಾಯಿ ದೇವಸ್ಥಾನಗಳಲ್ಲಿ ಸೇವೆಗೆ ಅವಕಾಶ ನೀಡುವ ಪ್ರಸ್ತಾವನೆ ಇಇದೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಸಂಬಂಧಿಸಿದವರ ಸಭೆ ನಡೆಸಲಾಗುತ್ತದೆ. ಶೀಘ್ರದಲ್ಲೇ ತೀರ್ಮಾನ ತಿಳಿಸಲಾಗುತ್ತದೆ ಎಂದು ತಿಳಿಸಿದರು.
ಕರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಸೆಪ್ಟೆಂಬರ್ ಪ್ರಾರಂಭದಿಂದ ಎಲ್ಲ ಸೇವೆ ಪ್ರಾರಂಭ ಮಾಡುವ ಬಗ್ಗೆ ಮುಜರಾಯಿ ಇಲಾಖೆಯು ಚಿಂತನೆ ನಡೆಸುತ್ತಿದೆ.