

ಬೆಂಗಳೂರು: ಕನ್ನಡ ಚಲನಚಿತ್ರ ಕಪ್ 4ನೇ ಅವೃತ್ತಿಯ ಕ್ರಿಕೆಟ್ ಪಂದ್ಯಾವಳಿಗೆ ಸೋಮವಾರ (ಡಿ. 25) ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್, ಶಿವರಾಜಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಮಣಿಸಿ ಕೆಸಿಸಿ 4 ಕಪ್ ಗೆದ್ದಿದೆ. ಮೂರು ದಿನಗಳು ಕಾಲ ನಡೆದ ಟೂರ್ನಿಗೆ ಸೋಮವಾರ ತೆರೆಬಿದ್ದಿದೆ. ಸಾಕಷ್ಟು ಸವಿನೆನಪುಗಳಿಗೆ ಈ ಟೂರ್ನಿ ಸಾಕ್ಷಿಯಾಯಿತು. ಅಲ್ಲದೆ, ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸಹ ಟೂರ್ನಿಯನ್ನು ನೇರವಾಗಿ ಕಣ್ತುಂಬಿಕೊಂಡರು. ಫೈನಲ್ ಪಂದ್ಯದ ವೇಳೆ ವಿಜಯವಾಣಿಯ ಫೋಟೋಗ್ರಾಫರ್ ರಾಘವೇಂದ್ರ. ಸಿ ಅವರು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ ಕೆಲವು ಮನಮೋಹಕ ಚಿತ್ರಗಳು ಇಲ್ಲಿವೆ ನೋಡಿ.
ವಿಜಯವಾಣಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಯಾಂಡಲ್ವುಡ್ ತಾರೆಯರು ಬ್ಯಾಟ್, ಬಾಲ್ ಹಿಡಿದು ಕ್ರೀಡಾಂಗಣದಲ್ಲಿ ಆಟವಾಡುವುದನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ವಿಆರ್ಎಲ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಅವರು ಸಹ ಭಾಗಿಯಾದರು.
ಕೊನೆಯ ದಿನವಾದ ಸೋಮವಾರ (ಡಿ. 25) ಕ್ರಿಸ್ಮಸ್ ಹಬ್ಬದ ರಜೆಯಿದ್ದ ಕಾರಣ ಹಿಂದೆಂದಿಗಿಂತಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು. ಹಾಡು, ಡಾನ್ಸ್, ಮನರಂಜನೆಯ ಜತೆಗೆ ಕ್ರೀಡೆಯ ಖುಷಿಯನ್ನು ಸವಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್ ಸೇರಿ ಹಲವು ರಾಜಕೀಯ ಗಣ್ಯರು ಹಾಗೂ ಧ್ರುವ ಸರ್ಜಾ, ಪ್ರಮೋದ್ ಶೆಟ್ಟಿ, ಸಪ್ತಮಿ ಗೌಡ, ರಾಗಿಣಿ, ಚೈತ್ರಾ ಆಚಾರ್, ರುಕ್ಮಿಣಿ ವಸಂತ್, ಅನುಪಮಾ ಸೇರಿ ಹಲವಾರು ತಾರೆಯರು ಕೂಡ ಆಗಮಿಸಿ ಆಟದ ಸಂಭ್ರಮ ಹೆಚ್ಚಿಸಿದರು.
ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್, ಡಾಲಿ ಧನಂಜಯ ನೇತೃತ್ವದ ಕದಂಬ ಲಯನ್ಸ್, ದುನಿಯಾ ವಿಜಯ್ ನೇತೃತ್ವದ ವಿಜಯನಗರ ಪೇಟ್ರಿಯಟ್ಸ್, ಉಪೇಂದ್ರ ನೇತೃತ್ವದ ಒಡೆಯರ್ ಚಾರ್ಜರ್ಸ್, ಶಿವರಾಜಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ಕಿಚ್ಚ ಸುದೀಪ್ ನೇತೃತ್ವದ ಹೊಯ್ಸಳ ಈಗಲ್ಸ್ ತಂಡಗಳು ಕಪ್ ಗೆಲ್ಲಲು ಹಣಾಹಣಿ ನಡೆಸಿದರು.
ಫೈನಲ್ ಪಂದ್ಯದಲ್ಲಿ ಶಿವರಾಜಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ಮುಖಾಮುಖಿಯಾದವು. ಟಾಸ್ ಗೆದ್ದ ರಾಷ್ಟ್ರಕೂಟ ತಂಡ ಗಂಗಾ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಅವಕಾಶ ನೀಡಿತು. ಆರಂಭದಲ್ಲೇ ಮುರಳಿ ವಿಜಯ್ ವಿಕೆಟ್ ಕಳೆದುಕೊಂಡು ಗಂಗಾ ತಂಡ ರನ್ ಸ್ಕೋರ್ ಮಾಡಲು ಪರದಾಡುವಂತಾಯಿತು. ರಾಷ್ಟ್ರಕೂಟ ಬಿಗಿ ಬೌಲಿಂಗ್ ದಾಳಿ ನಡುವೆಯೂ ಕೆ.ಸಿ ಅವಿನಾಶ್ 12 ಎಸೆತಗಳಲ್ಲಿ 40 ರನ್ ಬಾರಿಸಿ ತಂಡದ ಮೊತ್ತವನ್ನು 111ಕ್ಕೆ ತಲುಪಿಸಲು ನೆರವಾದರು.
ಚೇಸಿಂಗ್ ಶುರು ಮಾಡಿದ ರಾಷ್ಟ್ರಕೂಟ ಪರ ಸುರೇಶ್ ರೈನಾ ಅದ್ಭುತ ಆರಂಭ ನೀಡಿದರು. ಆದರೆ, 21 ಎಸೆತಗಳಲ್ಲಿ 55 ರನ್ ಬಾರಿಸಿದ ರೈನಾ 9ನೇ ಓವರ್ನಲ್ಲಿ ಪ್ರಿನ್ಸ್ ಬೌಲಿಂಗ್ ದಾಳಿಗೆ ಔಟಾದರು. ಬಳಿಕ ದಿಲೀಪ್ ವಿಕೆಟ್ ಕೂಡ ಪಡೆದು ಪ್ರಿನ್ಸ್ ಮ್ಯಾಚ್ ದಿಕ್ಕನ್ನು ಬದಲಿಸಿದರು. ಕೊನೆಯ ಓವರ್ನಲ್ಲಿ 15ರನ್ಗಳು ಬೇಕಾಗಿದ್ದು, 24 ಎಸೆತಗಳಲ್ಲಿ 39 ರನ್ ಗಳಿಸಿದ ಪ್ರದೀಪ್ ವಿಕೆಟ್ ಒಪ್ಪಿಸಿದರು. ಕೊನೆಯ ಬಾಲ್ಗೆ 5 ರನ್ಗಳ ಅವಶ್ಯಕತೆಯಿತ್ತು. ಅದರೆ, 2 ರನ್ ಹೊಡೆಯಲು ಶಕ್ತರಾಗಿ ರಾಷ್ಟ್ರಕೂಟ ಫೈನಲ್ನಲ್ಲಿ ಗೆಲ್ಲದೇ ನಿರಾಸೆ ಕಂಡಿತು. ಗಂಗಾ ವಾರಿಯರ್ಸ್ ಗೆದ್ದು ಸಂಭ್ರಮಿಸಿತು.
ಕೆಸಿಸಿ ಪಂದ್ಯದಲ್ಲಿ ಭಾಗವಹಿಸುತ್ತಿರುವವರು ಚಲನಚಿತ್ರ ಕ್ಷೇತ್ರದವರೇ ಆದರೂ ವೃತ್ತಿಪರ ಕ್ರಿಕೆಟ್ ಆಟಗಾರರ ಶಿಸ್ತು ಅವರಲ್ಲಿತ್ತು. ಪ್ರತಿಯೊಬ್ಬರೂ ಗೆಲ್ಲುವುದಕ್ಕೆ ಆಡಬೇಕು ಎನ್ನುವ ಮನೋಭಾವದಿಂದ ಆಡಿದರು. ಶಿವರಾಜಕುಮಾರ್ ಅಂತಾರಾಷ್ಟ್ರೀಯಯ ಆಟಗಾರ ರಾಬಿನ್ ಉತ್ತಪ್ಪ ವಿಕೆಟ್ ಪಡೆದಿದ್ದು, ಕೊನೆಯ ಓವರ್ನಲ್ಲಿ ಉಪೇಂದ್ರ ಎರಡು ವಿಕೆಟ್ ಪಡೆದು ಗೆಲುವಿಗೆ ಕಾರಣವಾಗಿದ್ದು ಕೊನೆಯ ದಿನದ ಪಂದ್ಯಗಳ ಹೈಲೈಟ್ಸ್.
5ಜಿ ಆಂಬುಲೆನ್ಸ್ ಅನಾವರಣ
ತುರ್ತು ಪರಿಸ್ಥಿತಿಯಲ್ಲಿ ಅನುಕೂಲವಾಗುವಂತೆ ಭಾರತದ ಮೊದಲ 5ಜಿ ಕನೆಕ್ಟೆಡ್ ಆಂಬುಲೆನ್ಸ್ ಅಪೊಲೊ ಆಸ್ಪತ್ರೆ ವತಿಯಿಂದ ಜಾರಿಗೆ ಬರುತ್ತಿದೆ. ಆಸ್ಪತ್ರೆಯಲ್ಲಿ ಸಿಗುವ ಬಹುತೇಕ ಎಲ್ಲ ಅನುಕೂಲಗಳನ್ನು ಹೊಂದಿರುವಂಥ ಆಂಬುಲೆನ್ಸ್ ಇದಾಗಿದ್ದು, ಕೆಸಿಸಿ ಸಮಾರೋಪ ಸಮಾರಂಭದಲ್ಲಿ ಸುದೀಪ್, ಸುರೇಶ್ ರೈನಾ ಹಾಗೂ ರಾಬಿನ್ ಉತ್ತಪ್ಪ ಇದನ್ನು ಲೋಕಾರ್ಪಣೆಗೊಳಿಸಿದರು.
ಮನರಂಜನೆಯ ಸಮಾರೋಪ
ಕರ್ನಾಟಕ ರಾಜ್ಯದ ಗತವೈಭವವನ್ನು, ಭವ್ಯ ಇತಿಹಾಸವನ್ನು, ‘ಕರ್ನಾಟಕ’ ನಾಮಕರಣದ 50ನೇ ವರ್ಷದ ಸಂಭ್ರಮವನ್ನು ಕರಗ, ವೀರಗಾಸೆ, ಯಕ್ಷಗಾನ, ಡೊಳ್ಳುಕುಣಿತ ಹಲವು ಜಾನಪದ ನೃತ್ಯಗಳ ನ್ನೊಳಗೊಂಡ ಕಾರ್ಯಕ್ರಮದ ಮೂಲಕ ಸಾರಲಾಯಿತು. ರ್ಯಾಪರ್ ಅಲೋಕ್, ಚಂದನ್ ಶೆಟ್ಟಿ ಹಾಡಿನ ಮೂಲಕ ಮನರಂಜಿಸಿದರು.
ಕೆಸಿಸಿ ಒಂದು ಚಿಕ್ಕ ರೀತಿಯಲ್ಲಿ ಕಂಡ ಕನಸು. ಈಗ ದೊಡ್ಡ ಮಟ್ಟಕ್ಕೆ ಹೋಗುತ್ತಿದೆ ಎಂದರೆ ಇದರಲ್ಲಿ ಅನೇಕರ ಪಾತ್ರವಿದೆ. ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿದರು.
ಫೈನಲ್ ತಲುಪಲು ಹೋರಾಟ
ಮೊದೆಲೆರಡು ದಿನಗಳಲ್ಲಿ ಒಟ್ಟು 12 ಪಂದ್ಯಗಳು ನಡೆದಿದ್ದವು. 4 ಪಂದ್ಯಗಳಲ್ಲಿ ತಲಾ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಕದಂಬ ಲಯನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಗಂಗಾ ವಾರಿಯರ್ಸ್ ಎರಡನೇ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ಮೂರನೇ ಸ್ಥಾನದಲ್ಲಿದ್ದವು. ಮೂರನೇ ದಿನ ಮೂರು ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಹೊಯ್ಸಳ ಈಗಲ್ಸ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗಂಗಾ ವಾರಿಯರ್ಸ್ 4 ವಿಕೆಟ್ ನಷ್ಟಕ್ಕೆ 109 ರನ್ ಕಲೆಹಾಕಿತು. ಅದನ್ನು ಬೆನ್ನತ್ತಿದ ಹೊಯ್ಸಳ ಈಗಲ್ಸ್ 10 ಓವರ್ಗಳಲ್ಲಿ 99 ರನ್ ಗಳಿಸಲು ಮಾತ್ರ ಶಕ್ತರಾದರು. 10 ರನ್ಗಳ ಗೆಲುವು ಸಾಧಿಸಿದ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ಫೈನಲ್ ತಲುಪಿದ ಮೊದಲ ತಂಡ ಎನಿಸಿಕೊಂಡಿತು.
ಎರಡನೇ ಪಂದ್ಯದಲ್ಲಿ ಒಡೆಯರ್ ಚಾರ್ಜರ್ಸ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಜಯನಗರ ಪೇಟ್ರಿಯಟ್ಸ್ 6 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿತು. ಸರಳ ಗುರಿಯನ್ನು ಚೇಸ್ ಮಾಡಿದ ಒಡೆಯರ್ ಚಾರ್ಜರ್ಸ್ 8.5 ಒವರ್ಗಳಲ್ಲಿ 101 ರನ್ ಬಾರಿಸಿ 6 ವಿಕೆಟ್ಗಳಿಂದ ಗೆದ್ದು ಸರಣಿಯ ಮೊದಲ ಜಯ ಸಾಧಿಸಿತು. ಮೂರನೇ ಪಂದ್ಯದಲ್ಲಿ ಕದಂಬ ಲಯನ್ಸ್ ಮೊದಲು ಬ್ಯಾಟಿಂಗ್ ಮಾಡಿದ್ದು, ಆರಂಭಿಕ ಬ್ಯಾಟರ್ ರಾಬಿನ್ ಉತ್ತಪ್ಪ 30 ಎಸೆತಗಳಲ್ಲಿ 64 ರನ್ ಗಳಿಸಿ ತಂಡದ ಮೊತ್ತವನ್ನು 102 ತಲುಪಿಸಲು ನೆರವಾದರು. ನಂತರ ಚೇಸ್ ಮಾಡಿದ ರಾಷ್ಟ್ರಕೂಟ ಪ್ಯಾಂಥರ್ಸ್ 7.4 ಓವರ್ಗಳಲ್ಲಿ 102 ರನ್ಗಳಿಸಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಪ್ಯಾಂಥರ್ಸ್ ಪರ ಸ್ಪೋಟಕ ಬ್ಯಾಟಿಂಗ್ ಮಾಡಿದ ಸುರೇಶ್ ರೈನಾ 24 ಎಸೆತಗಳಲ್ಲಿ ಅಜೇಯ 55 ರನ್ಗಳಿಸಿ ನಿರ್ಣಾಯಕ ಪಂದ್ಯದಲ್ಲಿ ತಂಡದ ಗೆಲುವಿಗೆ ನೆರವಾದರು.
ಇಡೀ ದೇಶಕ್ಕೆ ಮಾದರಿಯಾಗುವಂತಹ ಕ್ರಿಕೆಟ್ ಪಂದ್ಯಾವಳಿಯನ್ನು ಕನ್ನಡ ಚಿತ್ರರಂಗ ಆಯೋಜಿಸಿದೆ. ಈ ಸಾಹಸಕ್ಕೆ ಕನ್ನಡ ಚಿತ್ರರಂಗದ ಪರವಾಗಿ ನಮ್ಮ ಸರ್ಕಾರ ಎಂದಿಗೂ ಜತೆಗಿರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಾನೂ ಈ ಹಿಂದೆ ಕ್ರೀಡಾಪಟು ಆಗಿದ್ದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದೆ. ಈ ಕ್ರಿಕೆಟ್ ಪಂದ್ಯವನ್ನು ನೋಡಲು ಖುಷಿಯಾಗುತ್ತದೆ. ಕೆಸಿಸಿ ಇನ್ನೂ ಹೆಚ್ಚು ಖ್ಯಾತಿ ಪಡೆಯಬೇಕು. ಕನ್ನಡ ಚಿತ್ರರಂಗ ಹಾಗೂ ಕೆಸಿಸಿ ಜತೆ ನಮ್ಮ ಸರ್ಕಾರ ಸದಾ ಜತೆಗಿರಲಿದೆ. ಇದರ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೂ ತರುತ್ತೇನೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.