ಚಿನ್ನ 2.50 ಲಕ್ಷ ರೂ. ದಾಟಿದ್ರೂ ಅಚ್ಚರಿಯಿಲ್ಲ! ಇಷ್ಟೊಂದು ಏರಿಕೆಗೆ ಕಾರಣಗಳೇನು? ಹೀಗಿದೆ ತಜ್ಞರ ಉತ್ತರ | Gold

gold rate
Published on

ನವದೆಹಲಿ: ಮನೆಯಲ್ಲಿದ್ದರೆ ಚಿನ್ನ (Gold) ಚಿಂತೆ ಏತಕೆ ಇನ್ನಾ ಎಂಬ ಮಾತಿತ್ತು. ಆದರೆ, ಈಗ ಅದು ಬಹಳ ದೂರ ಉಳಿದಿದೆ ಎಂದೇ ಹೇಳಬಹುದು. ಕಾರಣ, ಮನೆಯಲ್ಲಿ ಚಿನ್ನವಿದ್ದರೆ ಚಿಂತೆ ದೂರ ಎಂದು ಹೇಳಬಹುದಿತ್ತು. ಆದ್ರೆ, ಖರೀದಿ ಮಾಡೋಣ ಎಂದರೆ, ಸ್ವರ್ಣದ ಬೆಲೆ ಆಕಾಶಕ್ಕೇರಿ ಕುಳಿತಿದೆ. ದಿನ ಕಳೆದಂತೆ ಗೋಲ್ಡ್ ಬೆಲೆಯೂ ಸಾವಿರಾರು ರೂ. ಏರಿಕೆಯಾಗುತ್ತಿದ್ದು, ಸಾರ್ವಕಾಲಿಕ ದಾಖಲೆ ಗರಿಷ್ಠ ಮಟ್ಟವನ್ನು ಮೀರಿ ಹೋಗುತ್ತಿದೆ. ಮುಂಬರುವ ಅವಧಿಯಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ, ಇನ್ನೆರೆಡು ವರ್ಷಗಳಲ್ಲಿ 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆ 2.50 ಲಕ್ಷದಿಂದ 3 ಲಕ್ಷ ರೂ. ತಲುಪುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.

ಜನವರಿ 2025ರಿಂದ...

ದೇಶದಲ್ಲಿ ಚಿನ್ನದ ಬೆಲೆಗಳು ಪ್ರಸ್ತುತ ಹೊಸ ದಾಖಲೆಗಳನ್ನು ನಿರ್ಮಿಸುತ್ತಿವೆ. 24 ಕ್ಯಾರೆಟ್ ಚಿನ್ನದ 10 ಗ್ರಾಂ 1.30 ಲಕ್ಷ ರೂ. ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 1.25 ಲಕ್ಷ ರೂ. ತಲುಪಿದೆ. ಜನವರಿ 2025ರಿಂದ ಚಿನ್ನದ ದರ ಶೇ.67ರಷ್ಟು ಹೆಚ್ಚಾಗಿದೆ. ಈ ವರ್ಷ ಚಿನ್ನದ ಬೆಲೆಯಲ್ಲಿನ ಈ ಏರಿಕೆಯು ಷೇರು ಮಾರುಕಟ್ಟೆಗಳನ್ನು ಸಹ ಅಲುಗಾಡಿಸಿವೆ. ಇದು ಹೂಡಿಕೆದಾರರಲ್ಲಿ ಚಿನ್ನದ ಬೆಲೆಗಳು ಯಾವ ಮಟ್ಟಕ್ಕೆ ತಲುಪುತ್ತವೆ ಎಂಬ ಚರ್ಚೆಗೆ ಕಾರಣವಾಗಿದೆ.

ಸ್ವರ್ಣದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು ಎಂದು ನೋಡಿದಾಗ, ದೇಶಗಳ ನಡುವಿನ ಉದ್ವಿಗ್ನತೆಯ ಜತೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಹೆಚ್ಚಳ, ವ್ಯಾಪಾರ ಉದ್ವಿಗ್ನತೆ, ಅಮೆರಿಕ ಬಡ್ಡಿದರಗಳು, ಸಾರ್ವಜನಿಕರಲ್ಲಿ ಖರೀದಿ ಆಸಕ್ತಿ ಏರಿಕೆ ಮತ್ತು ಬೆಲೆಗಳು ಏರುತ್ತಿರುವಾಗ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಕಿ ಹೂಡಿಕೆಯತ್ತ ಮುಖ ಮಾಡಿರುವುದು ಗಮನಾರ್ಹ. ಇದು ಬೆಲೆ ಏರಿಕೆಗೆ ಅಧಿಕ ಬಲವನ್ನು ನೀಡುತ್ತಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

70 ಟನ್‌ಗಳನ್ನು ಮೀರಿ

ಇನ್ನು ಬಿಕ್ಕಟ್ಟು ಮತ್ತು ಅನಿಶ್ಚಿತತೆಯ ಸಮಯದಲ್ಲಿ, ವಿವಿಧ ದೇಶಗಳ ಕೇಂದ್ರ ಬ್ಯಾಂಕುಗಳು ಮತ್ತು ಸಂಸ್ಥೆಗಳು ಡಾಲರ್ ಬಾಂಡ್‌ಗಳಲ್ಲಿನ ತಮ್ಮ ಹೂಡಿಕೆಗಳನ್ನು ಇಳಿಸುತ್ತಿವೆ ಮತ್ತು ಆರ್ಥಿಕತೆಯನ್ನು ಭದ್ರಪಡಿಸಿಕೊಳ್ಳಲು ತಮ್ಮ ಚಿನ್ನದ ನಿಕ್ಷೇಪಗಳನ್ನು ಹೆಚ್ಚಿಸುತ್ತಿವೆ. ಈ ವರ್ಷ, ಪೋಲೆಂಡ್, ಕಝಾಕಿಸ್ತಾನ್, ಚೀನಾ ಮತ್ತು ಟರ್ಕಿಯಂತಹ ದೇಶಗಳು ಬಹಳಷ್ಟು ಚಿನ್ನವನ್ನು ಖರೀದಿಸಿ ಸಂಗ್ರಹಿಸುತ್ತಿವೆ. ಆದಾಗ್ಯೂ, ಈ ದೇಶಗಳು ಒಟ್ಟಾಗಿ 70 ಟನ್‌ಗಳನ್ನು ಮೀರಿ ಅಧಿಕ ಚಿನ್ನವನ್ನು ಖರೀದಿಸಿವೆ. 2026-2027ರ ವೇಳೆಗೆ ಕೇಂದ್ರ ಬ್ಯಾಂಕುಗಳ ಗೋಲ್ಡ್ ಖರೀದಿಗಳು ಇನ್ನಷ್ಟು ಹೆಚ್ಚಾಗುತ್ತವೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ, ವಿಶೇಷವಾಗಿ ಜಗತ್ತಿನಲ್ಲಿ ಅಸ್ಥಿರತೆ ಮುಂದುವರಿದರೆ!

ಚಿನ್ನದ ಬೆಲೆಗಳು ಕುಸಿಯಲು, ರಷ್ಯಾ-ಯುಕ್ರೇನ್ ಯುದ್ಧವು ಸಂಪೂರ್ಣವಾಗಿ ಅಂತ್ಯಗೊಳ್ಳಬೇಕು. ಟ್ರಂಪ್ ಅವರ ಸುಂಕಗಳು ಮತ್ತು ಆರ್ಥಿಕ ಮಂದಗತಿಯ ಪರಿಣಾಮದ ಬಗ್ಗೆ ಸ್ಪಷ್ಟತೆ ಇರಬೇಕು. ಡಾಲರ್ ಮತ್ತೆ ಚೇತರಿಸಿಕೊಳ್ಳಬೇಕು. ಡಾಲರ್ ಮೌಲ್ಯ ಹೆಚ್ಚಾದರೆ, ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಚಿನ್ನದ ಬೆಲೆ ಕುಸಿಯಬಹುದು. ಅದೇ ರೀತಿ, ಕೇಂದ್ರೀಯ ಬ್ಯಾಂಕುಗಳು ಸಹ ಚಿನ್ನದ ಖರೀದಿಯನ್ನು ಕಡಿಮೆ ಮಾಡಬೇಕಾಗುತ್ತದೆ. ಮೇಲಿನ ಅಂಶಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದ್ದೇ ಆದರೆ, ಸ್ವರ್ಣದ ಬೆಲೆಗಳು ಹಂತ ಹಂತವಾಗಿ ಕುಸಿಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಆದಾಗ್ಯೂ, ಪ್ರಸ್ತುತ ಬೆಲೆಗಳನ್ನು ನೋಡಿದಾಗ, ಕುಸಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಯಾದರೂ, ಚಿನ್ನದ ಬೆಲೆಗಳು ಮಧ್ಯಮ ವರ್ಗದ ಜನರ ಕೈಗೆಟುಕಲು ತುಂಬಾನೇ ಸಮಯ ಹಿಡಿಯಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net