ಕಾಸರಗೋಡು: ಚಿನ್ನ ಖರೀದಿ ಸೋಗಿನಲ್ಲಿ ಕುಂಬಳೆಯ ಜ್ಯುವೆಲ್ಲರಿಯೊಂದಕ್ಕೆ ಆಗಮಿಸಿದ ಬುರ್ಖಾಧಾರಿ ಮಹಿಳೆ ಒಂದು ಪವನ್ ತೂಕದ ಬ್ರೇಸ್‌ಲೆಟ್ ಕಳವುಗೈದು ಪರಾರಿಯಾಗಿದ್ದಾಳೆ. ಮಹಿಳೆ ಚಲನವಲನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಈಕೆ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಚಿನ್ನದಂಗಡಿ ಮಾಲೀಕ ಹಮೀದ್ ದೂರಿನ ಮೇರೆಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸೋಮವಾರ ಚಿನ್ನ ಖರೀದಿ ನೆಪದಲ್ಲಿ ಆಗಮಿಸಿದ ಬುರ್ಖಾಧಾರಿ ಮಹಿಳೆ ಹಲವು ಬ್ರೇಸ್‌ಲೆಟ್ ಪರಿಶೀಲಿಸಿದ್ದಳು. ಚಿನ್ನದ ದರ ಕೇಳಿ ಬಹಳ ಹೊತ್ತಿನ ನಂತರ ಕೈಯಲ್ಲಿ ಸಾಕಷ್ಟು ಹಣವಿಲ್ಲದಿರುವುದರಿಂದ ಮತ್ತೆ ಬರುವುದಾಗಿ ತಿಳಿಸಿ ತೆರಳಿದ್ದಳು. ರಾತ್ರಿ ವೇಳೆ ಚಿನ್ನಾಭರಣ ಅಂಗಡಿ ಸಿಬ್ಬಂದಿ ಚಿನ್ನಾಭರಣ ಪರಿಶೀಲಿಸಿ ತಿಜೋರಿಯಲ್ಲಿರಿಸಲು ಮುಂದಾಗುತ್ತಿದ್ದಂತೆ ಬ್ರೇಸ್‌ಲೆಟ್ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಸಿಸಿ ಕ್ಯಾಮರಾ ಫೂಟೇಜ್ ತಪಾಸಣೆ ನಡೆಸಿದಾಗ ಮಹಿಳೆ ಚಿನ್ನಾಭರಣ ಎಗರಿಸಿರುವ ದೃಶ್ಯ ದಾಖಲಾಗಿತ್ತು.