

ವಿಜಯವಾಣಿ ಸುದ್ದಿಜಾಲ ಕಡಬ
ಶಿಷ್ಟರ ರಕ್ಷಣೆ ಮಾಡಲು, ದುಷ್ಟರಿಗೆ ಶಿಕ್ಷೆ ನೀಡಲು ನಾನಾ ಅವತಾರಗಳನ್ನು ಎತ್ತಿದ ಶ್ರೀ ಕೃಷ್ಣ ಪರಮಾತ್ಮನ ಸಾತ್ವಿಕ ಗುಣಗಳು ಆಧುನಿಕ ಕಾಲಘಟ್ಟದ ನಮಗೆಲ್ಲ ಆದರ್ಶವಾಗಬೇಕು ಎಂದು ನಿವೃತ್ತ ಶಿಕ್ಷಕ ಬಾಲಚಂದ್ರ ಮುಚ್ಚಿಂತ್ತಾಯ ಹೇಳಿದರು.
ಕಡಬ ತಾಲೂಕಿನ ಕೊಯಿಲ-ರಾಮಕುಂಜ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಗೋಕುಲನಗರದಲ್ಲಿ ಭಾನುವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮಾರೋಪದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ರಾಮಕುಂಜ ಗ್ರಾಪಂ ಅಧ್ಯಕ್ಷೆ ಬಿ.ಸುಚೇತಾ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಮೋಹನ್ದಾಸ್ ಶೆಟ್ಟಿ ಬಡಿಲ ಅಧ್ಯಕ್ಷತೆ ವಹಿಸಿದ್ದರು. ಕೊಲ ಗ್ರಾಪಂ ಅಧ್ಯಕ್ಷೆ ಪುಷ್ಪಾ ಆರುವಾರ ಉಪಸ್ಥಿತರಿದ್ದರು.
ಪುಟಾಣಿಗಳಿಗೆ ನಡೆದ ಕೃಷ್ಣ ವೇಷ ಸ್ಪರ್ಧೆ, ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ಕಾರ್ಯದರ್ಶಿ ಸುಧೀಶ್ ಪಟ್ಟೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಜತೆ ಕಾರ್ಯದರ್ಶಿಗಳಾದ ದೀಕ್ಷಿತ್ ಪೂರಿಂಗ, ವಾಮನ ಬರಮೇಲು ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ವಿನೋದ್ ಪಲ್ಲಡ್ಕ ವರದಿ ವಾಚಿಸಿದರು. ಕೃಷ್ಣಮೂರ್ತಿ ಕೆಮ್ಮಾರ ನಿರೂಪಿಸಿ, ಸ್ವಾಗತಿಸಿದರು. ಸಮಿತಿ ಸಂಚಾಲಕ ಪ್ರಕಾಶ್ ಕೆಮ್ಮಾರ ವಂದಿಸಿದರು. ಬೆಳಗ್ಗೆ ಅಷ್ಟಮಿ ಕಟ್ಟೆಯಲ್ಲಿ ಆತೂರು ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಪೂಜಾ ವಿಧಿವಿಧಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ಸೇವೆ ನಡೆಯಿತು. ಚಾರ್ವಾಕ ಕಪಿಲೇಶ್ವರ ಕಲಾ ಸಮಿತಿ ವತಿಯಿಂದ ಎಸ್ಆರ್ಕೆ ಲ್ಯಾಂಡರ್ಸ್ ಪ್ರಾಯೋಜಕತ್ವದಲ್ಲಿ ಆಕರ್ಷಕ ಚೆಂಡೆ ಪ್ರದರ್ಶನ ನಡೆಯಿತು.
ನಿವೃತ್ತ ಹಿರಿಯ ಪಶು ಪರಿವೀಕ್ಷಕ ಆಶೋಕ್ ಕೊಲ, ಮೆಸ್ಕಾಂ ಪವರ್ ಮ್ಯಾನ್ ವಿಶ್ವನಾಥ ರಾಮಕುಂಜ, ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಕುಶಾಲಪ್ಪ ಗೌಡ ಆನೆಗುಂಡಿ, ನಿವೃತ್ತ ಸೈನಿಕ ಸುಬೇದಾರ್ ಗುಣಕರ ಕೆ.ಕೆರ್ನಡ್ಕ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ವ್ಯವಸ್ಥಾಪಕ ಪದ್ಮಪ್ಪ ಗೌಡ ಸಂಪ್ಯಾಡಿ, ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಕುಶಾಲಪ್ಪ ಗೌಡ ಪಲ್ಲಡ್ಕ, ಕಡಬ ಭೂಮಾಪನ ಇಲಾಖಾ ನಿವೃತ್ತ ಸಿಬ್ಬಂದಿ ಮೋನಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.