ಗೋಕರ್ಣ: ಅಬೋಧದಲ್ಲಿ ಗೈದ ಮನವರಿಯದ ಪಾಪ ತಾನಿರದು. ನಮ್ಮ ತಿಳಿವಳಿಕೆಗೆ ಬಾರದೆ, ಮನಸು ಅರಿಯದೆ ಮಾಡಿದ ಪಾಪಗಳಿಗೆ ದೋಷ ಇರದು. ಅದರಲ್ಲಿಯೂ 14 ವರ್ಷ ವಯೋಮಾನದ ಒಳಗೆ ಬಾಲಭಾವದಲ್ಲಿ ಮಾಡಲಾದ ತಪ್ಪುಗಳಿಗೆ ಶಿಕ್ಷೆ ಸಲ್ಲ ಎಂದು ಯಮನ ಮೂಲ ನಿಯಮವನ್ನೇ ಬದಲಿಸಿ, ಯಮನಿಗೇ ಶಾಪ ಕೊಟ್ಟ ಮಹಾಮುನಿಗಳಿದ್ದಾರೆ ಎಂದು ಅಶೋಕೆಯ ಗುರುದೃಷ್ಟಿ ಭವನದಲ್ಲಿ 31ನೇ ಅನಾವರಣ ಚಾತುರ್ವಸ್ಯ ದೀಕ್ಷೆಯಲ್ಲಿರುವ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಶನಿವಾರ ಜರುಗಿದ ಜೀವಯಾನ ಪ್ರವಚನದಲ್ಲಿ ಆಶೀರ್ವದಿಸಿದ ಶ್ರೀಗಳು, ಅಂತಹ ಮಹಾನ್ ತಪಸ್ವಿ, ಧೃತಿಮಾನರಾದ ಮುನಿ ಮಾಂಡವ್ಯರು ಸಜೀವವಾಗಿ ಯಮಲೋಕಕ್ಕೆ ಹೋಗಿ ತಪೋಬಲದಿಂದ ಎಂತಹ ಎತ್ತರಕ್ಕೆ ಬೇಕಾದರೂ ಏರಬಹುದು ಎನ್ನುವುದನ್ನು ಲೋಕಕ್ಕೆ ತೋರಿಸಿಕೊಟ್ಟ ಮಹಾಯೋಗಿಗಳಾಗಿದ್ದಾರೆ ಎಂದರು.
ರಾಷ್ಟ್ರದ ಪಾಪ ರಾಜನಿಗೆ: ರಾಜಾ ರಾಷ್ಟ್ರ ಗತಂ ಪಾಪಮ್ ರಾಷ್ಟ್ರದ ಪಾಪ ರಾಜನ ಪಾಲು ಎಂಬ ಉಕ್ತಿಯಿದೆ. ಇದನ್ನು ಮಹಾಭಾರತದಲ್ಲಿ ಬರುವ ಮಹಾಮುನಿ ಮಾಂಡವ್ಯರ ಕತೆ ಋಜುವಾತಾಗಿಸಿದೆ. ಅಖಂಡ ತಪೋನಿಷ್ಠ ಮಾಂಡವ್ಯ ಮುನಿಗಳಿಗೆ ಚೋರರು ಮಾಡಿದ ದರೋಡೆಗಾಗಿ ಯಾವ ತಪ್ಪೂ ಎಸಗದ ಮಾಂಡವ್ಯರಿಗೂ ರಾಜ ಶೂಲಾರೋಪಣ ಶಿಕ್ಷೆ ವಿಧಿಸಿ ಶೂಲಕ್ಕೆ ಏರಿಸುತ್ತಾನೆ. ಶೂಲಬಾಧೆಗೊಳಗಾಗಿಯೂ ಯೋಗಬಲ ಮತ್ತು ತಮ್ಮ ತಪೋ ಸಾಮರ್ಥ್ಯದಿಂದ ಮಾಂಡವ್ಯರು ಸಾವನ್ನಪ್ಪದೆ ಸಜೀವರಾಗಿ ಯಮನ ಬಳಿಸಾರಿ ತನಗಾದ ಅನ್ಯಾಯವನ್ನು ಮತ್ತು ತನಗೆ ಕೊಟ್ಟ ಶಿಕ್ಷೆಯನ್ನು ಪ್ರಶ್ನಿಸುತ್ತಾರೆ. ತಕ್ಕ ಉತ್ತರ ಕೊಡದಿದ್ದಲ್ಲಿ ತನ್ನ ತಪಃಶಕ್ತಿಯ ಪ್ರಭಾವವನ್ನು ತೋರುವುದಾಗಿ ಎಚ್ಚರಿಸುತ್ತಾರೆ. ಅದಕ್ಕೆ ಯಮಧರ್ಮ 14ನೆ ವರ್ಷದ ತಮ್ಮ ಬಾಲ್ಯದಲ್ಲಿ ಮಾಂಡವ್ಯರು ಪತಂಗವೊಂದಕ್ಕೆ ಆಟವಾಡುವಾಗ ಕೊಟ್ಟ ತೊಂದರೆಗೆ ಈ ಶೂಲಾರೋಪಣವನ್ನು ಎದುರಿಸಬೇಕಾಯಿತು ಎಂದು ವಿವರಿಸುತ್ತಾನೆ.
ಮನವರಿಯದ ಪಾಪ: ಯಮನ ಉತ್ತರದಿಂದ ಸಂತೃಪ್ತರಾಗದ ಮಾಂಡವ್ಯರು ನಿನ್ನ ಈ ನಿಯಮವೇ ನ್ಯಾಯ ಸಮ್ಮತವಾಗಿಲ್ಲ.ಬಾಲಭಾವದ 14ನೇ ವರ್ಷದಲ್ಲಿ ಬೋಧದಲ್ಲಿ ಮಾಡಿರದ ಒಂದು ಕ್ರೀಡಾರ್ಥ ತಪ್ಪಿಗೆ ಇಂಥ ಶಿಕ್ಷೆ ಸಾಧುವಲ್ಲ. ಕಾರಣ ಇಂದಿನಿಂದ ನಿನ್ನ ಈ ನಿಯಮವನ್ನೇ ಬದಲಿಸುವುದಾಗಿ ತಿಳಿಸಿ 14 ವರ್ಷದವರೆಗೆ ಮನವರಿಯದೆ ಮಾಡಿದ, ದೋಷರಹಿತ ಪಾಪ ಪಾಪವಲ್ಲ. ಅದಕ್ಕೆ ಶಿಕ್ಷೆ ಸಲ್ಲ ಎಂಬ ನಿಯಮ ಜಾರಿಗೆ ತಂದು ಯಮ ಮಾಡಿದ ಪ್ರಮಾದಕ್ಕೆ ಮೂರು ಲೋಕಗಳಿಗೂ ದಂಡಾಧಿಕಾರಿಯಾದ ಯಮ ಭೂಮಿಯಲ್ಲಿ ಜನ್ಮ ತಾಳುವಂತೆ ಶಾಪವನ್ನಿತ್ತು ಆತ ಭೂಲೋಕದಲ್ಲಿ ಜನ್ಮ ಪಡೆಯುವಂತೆ ಶಿಕ್ಷೆ ವಿಧಿಸುತ್ತಾರೆ. ಧರ್ಮವಂತರಾಗಿ, ತಪನಿರತರಾಗಿ ಬದುಕಿದಲ್ಲಿ ಸಜೀವರಾಗಿ ಯಮಲೋಕಕ್ಕೆ ಹೋಗಿ, ಯಮನ ಎದುರು ನಿಂತು, ಆತನನ್ನೇ ಪ್ರಶ್ನಿಸುವ, ಯಮ ನಿಯಮವನ್ನೇ ಮೀರುವ ಶಕ್ತಿ ಬರುತ್ತದೆ ಎನ್ನುವುದಕ್ಕೆ ಮಾಂಡವ್ಯ ಮುನಿಗಳ ಪ್ರಕರಣ ಇಂದಿಗೂ ನಿದರ್ಶನವಾಗಿದೆ ಎಂದರು.
ಬದುಕು ಎಂದರೆ ಸಾವಿನ ಸಿದ್ಧತೆ. ಬದುಕು ದೀರ್ಘವಾದರೆ ಸಾವು ಒಂದು ಕ್ಷಣದ್ದು. ಅಂತಹ ಕ್ಷಣಾರ್ಧದ ಸಾವು ಸಂಕಟಯುಕ್ತ ಆಗದೆ ಆನಂದಮಯವಾಗಿ ಪದೋನ್ನತಿಯಾಗಬೇಕು. ಇಂತಹ ಸಾವನ್ನು ಸಾಧಿಸಲು ಜೀವನದ ಪ್ರತಿ ಕ್ಷಣ ಸತ್ಕಾರ್ಯ ನಿರತರಾಗಿ ನಿರ್ಮಲವಾಗಿರುವುದು ಉತ್ತಮ ದಾರಿಯಾಗಿದೆ ಎಂದು ಶ್ರೀಗಳು ಹೇಳಿದರು.
ಚಾತುರ್ವಸ್ಯ ಸೇವಾ ಸಮಿತಿ ವತಿಯಿಂದ ಶ್ರೀಗಳಿಗೆ ಫಲ ಸಮರ್ಪಣೆ ಕೈಗೊಳ್ಳಲಾಯಿತು. ಚಾತುರ್ವಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ, ವಿಶ್ವದ್ಯಾಪೀಠದ ಗೌರವಾಧ್ಯಕ್ಷ ಡಿ.ಡಿ. ಶರ್ಮ, ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮ, ಪ್ರಾಚಾರ್ಯ ನೃಸಿಂಹ ಭಟ್ಟ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಉದಯಶಂಕರ ಭಟ್ಟ ಮಿತ್ತೂರು, ವೀಣಾ ಜಿ.ಪುಳು ಇದ್ದರು. ಸುಧನ್ವ ಆರ್ಯ ಮತ್ತು ಅಶೋಕ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.