

ಗೋಕರ್ಣ: ಜ್ಯೋತಿಷ ಶಾಸ್ತ್ರ ಸಂಪೂರ್ಣವಾಗಿ ಲೋಕಹಿತಕ್ಕಾಗಿ ಮಾತ್ರ ನಮ್ಮ ಪೂರ್ವಜರಿಂದ ಆವಿಷ್ಕರಿತವಾದ ಅನುಪಮ ವಿದ್ಯೆಯಾಗಿದೆ. ಜ್ಯೋತಿಷ ಹೇಳುವ ಶಾಸ್ತ್ರಕಾರರಾದ ದೈವಜ್ಞರಿಗೆ ಧನ ಪ್ರಧಾನವಾಗಿ, ಅದರ ಮೇಲೆ ಮುಖ್ಯ ಲಕ್ಷ್ಯವನ್ನಿಟ್ಟು ಈ ವಿದ್ಯಾಮಹತಿಯನ್ನು ಅಂಥವರು ಹಣಕ್ಕೆ ಮಾರಿಕೊಳ್ಳಬಾರದು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕಿವಿಮಾತು ಹೇಳಿದರು.
ಇಲ್ಲಿನ ಅಶೋಕೆಯ ಗುರುದೃಷ್ಟಿ ಭವನದಲ್ಲಿ 31ನೆ ಅನಾವರಣ ಚಾತುರ್ವಸ್ಯದಲ್ಲಿರುವ ಶ್ರೀಗಳು, ‘ಕಾಲ’ ಸರಣಿ ಪ್ರವಚನದಲ್ಲಿ ಗ್ರಹಮೈತ್ರಿ ಮತ್ತು ಅಕ್ಷರವಿದ್ಯೆಯನ್ನು ವರ್ಣಿಸಿದರು.
ಜ್ಯೋತಿಷಿಗೆ ಧನವೇ ಮುಖ್ಯವಾದರೆ ಆತ ಹೇಳುವುದಕ್ಕೆ ಯಾವುದೇ ಫಲ ಬಾರದು. ಅದರ ಜತೆಗೆ ಪ್ರಶ್ನೆ ಕೇಳಿ ಜಾತಕ ತಿಳಿಯಲು ಬಂದ ಪ್ರಚ್ಛಕನಿಗೆ(ಪ್ರಶ್ನಾಕಾರಕ) ಅದು ಖಂಡಿತ ಒಳ್ಳೆಯದನ್ನು ಉಂಟುಮಾಡುವುದಿಲ್ಲ. ಇಂಥವರು ಹೇಳುವ ಜ್ಯೋತಿಷ ಪ್ರಚ್ಛಕರನ್ನು ಕರ್ಮಪಾಶದಿಂದ ತಪ್ಪಿಸಿಕೊಳ್ಳುವ ಬದಲು, ಆತನನ್ನು ಇನ್ನೂ ಹೆಚ್ಚು ಹೆಚ್ಚು ಕರ್ಮಪಾಶಕ್ಕೆ ಸಿಕ್ಕಿಸುತ್ತದೆ. ಆದ್ದರಿಂದ ಯಾವತ್ತೂ ವಿದ್ಯೆಯ ಹಿಂದೆ ಲಕ್ಷ್ಮಿ ಬರಬೇಕು, ಲಕ್ಷ್ಮಿಯ ಹಿಂದೆ ವಿದ್ಯೆ ಹೋಗಲೇಬಾರದು ಎಂದರು.
ಅಕ್ಷರವಿದ್ಯೆ: ಜಾತಕವನ್ನು ಅರಿಯಲು ಬರುವ ಪ್ರಚ್ಛಕನ ಪ್ರಶ್ನೆಯ ಪ್ರಥಮ ಹಾಗೂ ಪ್ರತಿ ಅಕ್ಷರದಿಂದ ಭವಿಷ್ಯದ ಫಲ ಹೇಳುವುದು ಜ್ಯೋತಿಷದ ಪ್ರಧಾನ ಭಾಗವಾಗಿತ್ತು. ಅಕ್ಷರ ಮುಖೇನ ಗ್ರಹಮೈತ್ರಿ, ಗ್ರಹವೈರ, ಗ್ರಹ ಬಾಂಧವ್ಯ, ಗ್ರಹ ಸಂಕೀರ್ಣ ಮುಂತಾದ ಸರ್ವ ಫಲಗಳನ್ನು ತಿಳಿಯಲು ಸಾಧ್ಯ. ಪ್ರಶ್ನಿತನ ಪ್ರಥಮೋದ್ಭವ ವರ್ಣಮಾತ್ರದಿಂದ ಆತನ ಸಂಪೂರ್ಣ ಜೀವನ ಚರಿತ್ರೆಯನ್ನು ವೀಕ್ಷಿಸಿ ಅದಕ್ಕೆ ಅಗತ್ಯ ಪರಿಹಾರ ಒದಗಿಸಬಹುದಾಗಿದೆ. ಸ್ವರ ಮತ್ತು ವ್ಯಂಜನ ಹಾಗೂ ಅವುಗಳ ದೀರ್ಘ ಮತ್ತು ಹೃಸ್ವಗಳು ಕಾರ್ಯಸಿದ್ಧಿಯ ಮಾರ್ಗವನ್ನು ತೋರುತ್ತವೆ. ಜ್ಯೋತಿಷದ ಈ ಅಕ್ಷರ ವಿಭಾಗದ ಪ್ರತಿ ವರ್ಣಕ್ಕೆ ವಾಯು, ಅಗ್ನಿ, ವರುಣ, ಇಂದ್ರಾದಿ ದೇವತೆಗಳ ಸಾನ್ನಿಧ್ಯವಿದೆ. ಹೀಗಾಗಿ ಪ್ರತಿ ಅಕ್ಷರ ಬೆಂಕಿ, ತಂಪು,ನಪುಂಸಕವೂ ಆಗಬಹುದು.ಕಾರಣ ಇಂತಹ ಜೀವಸಂಬಂಧಿ ಶಾಸ್ತ್ರದ ಫಲ ಪಡೆಯಲು ಪ್ರತಿಯೊಬ್ಬರೂ ನಿತ್ಯ ಗ್ರಹಯಾಗ ಮತ್ತು ಪಂಚಾಂಗ ಪಾಠದಲ್ಲಿ ನಿರತರಾಗಿ ಅವುಗಳ ಸಂಗಡ ಅನುಸಂಧಾನ ನಡೆಸುವಂತಾಗಬೇಕು. ಈ ಮೂಲಕ ನಿಮ್ಮ ಬದುಕು ಜಗದ ಪ್ರಶ್ನೆಗಳಿಗೆ ಉತ್ತರದಾಯಿಯಾಗುವಂತೆ ರೂಪಸಿಕೊಳ್ಳಿ ಎಂದು ಸ್ವಾಮೀಜಿ ತಿಳಿಸಿದರು.
ಅನಾವರಣ: ಕಾರ್ಯಕ್ರಮದಲ್ಲಿ ಗೋ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಬೆಂಗಳೂರಿನ ಡಾ. ಶ್ಯಾಮ್್ರಸಾದ ಅವರ ವಿಶಿಷ್ಟ ವ್ಯಕ್ತಿತ್ವವನ್ನು ಚಾತುರ್ವಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಅನಾವರಣಗೊಳಿಸಿದರು. ಡಾ. ಶ್ಯಾಮ್್ರಸಾದ ಅವರ ಸೇವಾ ವಿಶೇಷಗಳನ್ನು ಬಣ್ಣಿಸಿದ ಶ್ರೀಗಳು ಗೋವಿನ ಜೀವನವನ್ನು ಹಸನಾಗಿಸುವ ಪುಣ್ಯಜೀವಿಗಳಿಗೆ ಯಮನ ದರ್ಶನ ಮತ್ತು ನರಕ ಸಂದರ್ಶನ ಎಂಬುದಿಲ್ಲ. ಡಾ. ಶ್ಯಾಮ್್ರಸಾದ ಅವರು ತಾವು ಗೋ ಕಾಯಕ ಮಾಡುವ ಜತೆಗೆ ಹಲವರಿಗೆ ಇದಕ್ಕೆ ಪ್ರೇರಣೆಯಾಗಿ ಅವರನ್ನು ಕೂಡ ನರಕ ಮುಕ್ತರನ್ನಾಗಿಸುತ್ತಿದ್ದಾರೆ.ಹಲವು ವರ್ಷಗಳಿಂದ ಇದರಲ್ಲಿ ಸಂಪೂರ್ಣವಾಗಿ ನಿರತರಾದ ಇವರ ಶ್ಲಾಘನೀಯ ನಿಃಸ್ವಾರ್ಥ ಗೋ ಪೂಜೆ ಸಮಾಜದ ಸಮಸ್ತರಿಗೆ ಅನುಪಮ ಮಾದರಿಯಾಗಲಿ ಎಂದು ಹಾರೈಸಿ ಅವರನ್ನು ಆಶೀರ್ವದಿಸಿದರು.
ಚಾತುರ್ವಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಹವ್ಯಕ ಮಹಾಮಂಡಲ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ವಿವಿವಿ ಸಮಿತಿ ಅಧ್ಯಕ್ಷ ಎಸ್.ಎಸ್.ಹೆಗಡೆ, ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ಕೇಶವಪ್ರಕಾಶ ಎಂ. ಮತ್ತಿತರರಿದ್ದರು.