ಬಿಟ್ಟರೂ ಬಿಡದ ಬಿಟ್​ಕಾಯಿನ್: ಶ್ರೀಕಿ ಕೇಸಿನ ಮರು ತನಿಖೆಗೆ ಸರ್ಕಾರ ನಿರ್ಧಾರ; ಸಿಐಡಿಗೆ ಜವಾಬ್ದಾರಿ

Bit Coin
Published on

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿ, ಕೊನೆಗೆ ತಣ್ಣಗಾಗಿದ್ದ, ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಬಹುಕೋಟಿ ಬಿಟ್ ಕಾಯಿನ್ ಹಗರಣದ ತನಿಖೆ ಪುನರಾರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಹಲವು ರಾಜಕಾರಣಿಗಳು ಭಾಗಿಯಾಗಿದ್ದಾರೆ ಎನ್ನಲಾಗಿರುವ ಈ ಹಗರಣದ ತನಿಖೆಯನ್ನು ಸಿಐಡಿ ಮೂಲಕವೇ ಮುಂದುವರಿಸಲು ಸರ್ಕಾರ ಆಸಕ್ತಿ ತೋರಿದ್ದು, ತಾಂತ್ರಿಕ ಸಾಕ್ಷ್ಯಾಧಾರ ಸಂಗ್ರಹಕ್ಕೆ ಬೇರೆ ತನಿಖಾ ಸಂಸ್ಥೆಗಳ ನೆರವು ಕೊಡುವ ಬಗ್ಗೆ ಚರ್ಚೆ ನಡೆದಿದೆ.

ಪ್ರಕರಣದ ತನಿಖೆ ಜವಾಬ್ದಾರಿ ಯನ್ನು ಸಿಐಡಿಗೆ ಕೊಡಬೇಕಾ ಅಥವಾ ಬೇರೆ ತನಿಖಾ ಸಂಸ್ಥೆಗೆ ಕೊಡಬೇಕಾ ಎಂಬುದರ ಕುರಿತು ನಿರ್ಧಾರ ಆಗಬೇಕಿದೆ. ಸಿಐಡಿ ಸದ್ಯ ಪ್ರಬಲವಾಗಿದೆ. ಆದ್ದರಿಂದ, ಸಿಐಡಿಯೇ ತನಿಖೆ ಮುಂದುವರಿಸಿದರೆ ಬೇರೆ ಬೇರೆ ಏಜೆನ್ಸಿಗಳ ಸಹಕಾರವನ್ನು ಕೊಡಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ಪ್ರಕರಣ ಸಂಬಂಧ ಹೆಚ್ಚಿನ ತನಿಖೆಯನ್ನು ವಿಶೇಷ ತನಿಖಾ ತಂಡದಿಂದ (ಎಸ್​ಐಟಿ) ನಡೆಸುವಂತೆ ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್ ಅವರಿಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಮರು ತನಿಖೆಯಾಗುವುದು ಖಚಿತವಾಗಿದ್ದು, ಹಗರಣದಲ್ಲಿ ಕೈಜೋಡಿಸಿರುವವರಿಗೆ ನಡುಕ ಶುರು ವಾಗಿದೆ. ‘ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ 2 ಬಾರಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದೇನೆ.

ಯಾರಿಗೆಲ್ಲ ಹಣ ವರ್ಗಾವಣೆಯಾಗಿದೆ, ಅಕ್ರಮವಾಗಿ ಕೋಟ್ಯಂತರ ರೂ. ಹಣ ವರ್ಗಾವಣೆ ಯಾವ ರೀತಿ ಆಗಿದೆ ಎಂಬುದರ ಬಗ್ಗೆ ವಿವರವಾದ ತನಿಖೆ ನಡೆಸಬೇಕಾಗಿದೆ. ಒಟ್ಟಾರೆ ಹಗರಣದ ಮೇಲೆ ಬೆಳಕು ಚೆಲ್ಲುತ್ತೇವೆ’ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಬಿಟ್ ಕಾಯಿನ್ ವರ್ಗಾವಣೆಗೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸಿರುವುದು ಸಿಐಡಿ ತನಿಖೆಯಲ್ಲಿ ಈ ಹಿಂದೆಯೇ ಗೊತ್ತಾಗಿತ್ತು. ಡಿಜಿಟಲ್ ಸಾಕ್ಷ್ಯವನ್ನು ಎಲ್ಲಿ, ಯಾವ ರೀತಿ ನಾಶಪಡಿಸಲಾಗಿದೆ ಎಂಬುದರ ಪತ್ತೆಗೆ ವಿಧಿವಿಜ್ಞಾನ ತಜ್ಞರಿಂದ ವಿಶ್ಲೇಷಣೆ ನಡೆಸುವ ಅಗತ್ಯವಿದೆ. ಎಫ್​ಎಸ್​ಎಲ್ ತಜ್ಞರ ಪರಿಶೀಲನೆಯಿಂದಷ್ಟೇ ತಾಂತ್ರಿಕ ವಿವರಗಳು ಲಭ್ಯವಾಗುತ್ತವೆ ಎಂದು ಸಿಐಡಿ ಅಧಿಕಾರಿಗಳು ಆಗ ವರದಿ ಕೊಟ್ಟಿದ್ದರು. ಆದರೆ, ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬ ಕಾರಣಕ್ಕಾಗಿ ವಿಧಿವಿಜ್ಞಾನ ತಜ್ಞರಿಗೆ ಪ್ರಕರಣವನ್ನು ಕೊಡದೆ ಮುಚ್ಚಿಹಾಕಲಾಯಿತು ಎಂಬ ಆರೋಪಗಳು ಕೇಳಿಬಂದಿವೆ.

11.55 ಕೋಟಿ ರೂ. ಎಗರಿಸಿದ್ದ ಶ್ರೀಕಿ: 2019ರಲ್ಲಿ ರಾಜ್ಯ ಸರ್ಕಾರದ ಇ-ಪ್ರಕ್ಯೂರ್​ವೆುಂಟ್ ವೆಬ್​ಸೈಟ್ ಹ್ಯಾಕ್ ಮಾಡಿದ್ದ ಶ್ರೀಕಿ, 11.55 ಕೋಟಿ ರೂ.ಗಳನ್ನು ಇತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು, ಅಕ್ರಮದಲ್ಲಿ ಭಾಗಿಯಾಗಿದ್ದ ಶ್ರೀಕಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ 14 ಬ್ಯಾಂಕ್ ಖಾತೆಗಳನ್ನು ಬ್ಲಾ್ಯಕ್ ಮಾಡಿ 1.44 ಕೋಟಿ ರೂ. ಜಪ್ತಿ ಮಾಡಿದ್ದರು. ಸರ್ಕಾರದ ಪೋರ್ಟಲ್​ಗಳನ್ನು ಹ್ಯಾಕ್ ಮಾಡಿ ಅದರಲ್ಲಿನ ಹಣವನ್ನು ಸ್ವಯಂ ಸೇವಾ ಸಂಸ್ಥೆಗಳಾದ ನಾಗ್​ಪುರದ ಉದಯ್ ಗ್ರಾಮ ವಿಕಾಶ್ ಸಂಸ್ಥೆ, ಉತ್ತರ ಪ್ರದೇಶದ ನಿಮ್ಮಿ ಎಂಟರ್​ಪ್ರೖೆಸಸ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದ. ಆನಂತರ ಎನ್​ಜಿಒ ಕಡೆಯಿಂದ ಮಾರಾಟಗಾರ, ಖರೀದಿದಾರ ನೆಪದಲ್ಲಿ ಹಣವನ್ನು ಶ್ರೀಕಿ ಸ್ವೀಕರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಹಗರಣ ಬೆಳಕಿಗೆ ಬಂದಿದ್ದೇಗೆ?: 2020 ನ.18ರಂದು ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಿಟ್ ಕಾಯಿನ್​ಗಳನ್ನು ಬಳಸುವ ಮೂಲಕ ಶ್ರೀಕಿ, ಡಾರ್ಕ್ ವೆಬ್​ಸೈಟ್​ನಲ್ಲಿ ಅಂತಾರಾಷ್ಟ್ರೀಯ ಡೀಲರ್​ಗಳ ಮುಖೇನ ಡ್ರಗ್ಸ್ ಖರೀದಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ಹಲವು ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಿರುವ ವಿಚಾರವನ್ನು ಶ್ರೀಕಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. 31 ಬಿಟ್ ಕಾಯಿನ್​ಗಳನ್ನು ಶ್ರೀಕಿ ವ್ಯಾಲೆಟ್​ನಿಂದ ಜಪ್ತಿ ಮಾಡಿರುವುದಾಗಿ ಸಿಸಿಬಿ ಅಧಿಕಾರಿಗಳು ಹೇಳಿದ್ದರು. ಆದರೆ, ನಂತರ ಯಾವುದೇ ಕಾಯಿನ್​ಗಳನ್ನು ಜಪ್ತಿ ಮಾಡಿಲ್ಲ ಎಂದು ಆಗಿನ ಕಮಿಷನರ್ ಕಮಲ್​ಪಂತ್ ಹೇಳಿದ್ದರು. ಶ್ರೀಕಿ ವ್ಯಾಲೆಟ್​ನಲ್ಲಿದ್ದ ಬಿಟ್ ಕಾಯಿನ್​ಗಳನ್ನು ಬೇರೆಬೇರೆಯವರ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡಿ, ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿರುವ ಆರೋಪ ಕೇಳಿಬಂದಿತ್ತು.

ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿರುವ ಬೇರೆ ಬೇರೆ ಹಗರಣಗಳ ತನಿಖೆ ನಡೆಸಲು ನಿರ್ಧರಿಸಲಾಗಿದೆ. 40 ಪರ್ಸೆಂಟ್ ಕಮಿಷನ್, ಕೋವಿಡ್ ಸಂದರ್ಭ ಔಷಧ ಖರೀದಿ ಅವ್ಯವಹಾರ, ಬಿಟ್ ಕಾಯಿನ್, ಪಿಎಸ್​ಐ ನೇಮಕಾತಿ ಅಕ್ರಮ ಸೇರಿ ನಾವು ಆರೋಪಿಸಿದ್ದ ಎಲ್ಲ ಹಗರಣಗಳ ತನಿಖೆ ಮಾಡಿಸಲಾಗುವುದು. | ಸಿದ್ದರಾಮಯ್ಯ, ಸಿಎಂ ಹಿಂದಿನ ಸರ್ಕಾರದ ಅವಧಿಯಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ನಡೆದಿರುವ ಹಗರಣಗಳನ್ನೂ ತನಿಖೆಗೆ ಒಳಪಡಿಸುತ್ತೇನೆ. ಮುಖ್ಯಮಂತ್ರಿಗಳು ಸಹ ಇದೇ ಮಾತನ್ನು ಹೇಳಿದ್ದಾರೆ. ಕೋರ್ಟ್ ತೀರ್ಪು ಬಂದ ನಂತರ ಅದರ ಆಧಾರದ ಮೇಲೆ ಪಿಎಸ್​ಐ ನೇಮಕಾತಿ ಹಗರಣದ ಮುಂದಿನ ತನಿಖೆ ಯಾವುದಿರಬೇಕು ಎಂಬುದನ್ನು ನಿರ್ಧಾರ ಮಾಡುತ್ತೇವೆ. | ಡಾ.ಜಿ.ಪರಮೇಶ್ವರ್, ಗೃಹ ಸಚಿವ ಬಿಟ್ ಕಾಯಿನ್ ಹಗರಣದ ಬಗ್ಗೆ ಎಲ್ಲ ಆಯಾಮ ಗಳಲ್ಲೂ ತನಿಖೆ ನಡೆಸಲಿ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಪಿಎಸ್​ಐ ಹಗರಣದ ತನಿಖೆ ಮುಕ್ತಾಯ ವಾಗಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ತನಿಖೆ ನಡೆಸುತ್ತೇವೆ ಎಂದು ಹೆದರಿಸುವುದನ್ನು ಬಿಟ್ಟು ತನಿಖೆ ಆರಂಭಿಸಲಿ. | ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ ಕರೊನಾ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಚಾಮರಾಜನಗರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾವುಗಳು ಸಂಭವಿಸಿದ ಪ್ರಕರಣದ ಮರು ತನಿಖೆಗೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅದಕ್ಕೆ ಉತ್ತರವಾಗಿ, ಯಾವ ಅಂಶಗಳ ಆಧಾರದ ಮೇಲೆ ಮರು ತನಿಖೆಯಾಗಬೇಕೆಂಬ ಚಾರ್ಜ್ ಫ್ರೇಮ್ ಮಾಡಿ ಕೊಡಿ ಎಂದು ಸರ್ಕಾರದಿಂದ ಪತ್ರ ಬಂದಿದೆ. ಕಾಲಮಿತಿ ಒಳಗಡೆ ಮರು ತನಿಖೆಯಾಗಬೇಕೆಂಬುದು ನಮ್ಮ ಉದ್ದೇಶ. | ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಜಲ ಜೀವನ ಮಿಷನ್​ನಲ್ಲಿ ಅಕ್ರಮಗಳು ನಡೆದಿದ್ದರೆ ತನಿಖೆ ನಡೆಸಲಾಗುವುದು. ಕಳಪೆ ಕಾಮಗಾರಿಗಳನ್ನು ನಡೆಸಿದ್ದರೆ ಅಂತಹ ಗುತ್ತಿಗೆದಾರರನ್ನು ಕಪು್ಪಪಟ್ಟಿಗೆ ಸೇರಿಸಲಾಗುವುದು ಹಾಗೂ ಹಣ ಮರು ವಸೂಲಿ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. | ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ ಇಂಧನ ಇಲಾಖೆಯಲ್ಲಿ ಅಧಿಕಾರಿಗಳೊಂದಿಗೆ ಪರಾಮರ್ಶೆ ಮಾಡುತ್ತಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡ ನಿರ್ಧಾರದಲ್ಲಿ ಎಲ್ಲೆಲ್ಲಿ ಲೋಪ ಕಂಡು ಬಂದಿದೆ ಎಂಬುದನ್ನು ತನಿಖೆ ಮಾಡುತ್ತಿದ್ದೇವೆ. ಎಸ್​ಐಟಿ ಮೂಲಕ ತನಿಖೆ ನಡೆಸುವ ಬಗ್ಗೆ ಸಿಎಂ, ಡಿಸಿಎಂ, ಗೃಹ ಸಚಿವರು ನಿರ್ಧಾರ ತೆಗೆದುಕೊಳ್ಳಬೇಕು. | ಕೆ.ಜೆ.ಜಾರ್ಜ್, ಇಂಧನ ಸಚಿವ

ಮೊರ್ಗನ್ ಕೇಸ್​ ನಂಟು: ಬೃಹತ್ ಕ್ರಿಪ್ಟೋಕರೆನ್ಸಿ ಹಗರಣದಲ್ಲಿ ಅಮೆರಿಕಾದಲ್ಲಿ ಬಂಧಿತರಾಗಿದ್ದ ನ್ಯೂಯಾರ್ಕ್​ನ ಲಿಶ್ಚನ್ ಸ್ಟೇನ್ ಹಾಗೂ ಹೀಥರ್ ರೀಹ್ನನ್ ಮೊರ್ಗನ್ ದಂಪತಿ ಪ್ರಕರಣಕ್ಕೂ ಹ್ಯಾಕರ್ ಶ್ರೀಕಿ ನಂಟಿರುವುದು ಗೊತ್ತಾಗಿತ್ತು. 2016 ಆಗಸ್ಟ್​ನಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟಿನ ಬಿಟ್​ಫಿನೆಕ್ಸ್ ವೆಬ್​ಸೈಟ್ ಹ್ಯಾಕ್ ಮಾಡಿದ್ದ ದಂಪತಿ, ಆಗ 71 ಮಿಲಿಯನ್ ಮೌಲ್ಯದ (7.10 ಕೋಟಿ) 1,19,754 ಬಿಟ್ ಕಾಯಿನ್ ಕದ್ದಿದ್ದರು.

ವಿದೇಶಿ ಹ್ಯಾಕರ್​ಗಳು ಭಾಗಿ!: ‘ಬಿಟ್ ಕಾಯಿನ್ ಹಗರಣ ಸಂಬಂಧ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಇದರ ಜಾಲ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿರುವ ಅನುಮಾನ ಇದೆ. ಇದರಲ್ಲಿ ಪರಿಣಿತ ಮತ್ತು ತಾಂತ್ರಿಕ ವಿಧಿ ವಿಜ್ಞಾನದಿಂದ ಕೃತ್ಯ ಎಸಗಲಾಗಿದೆ. ಈಗಾಗಲೇ ಬಿಟ್ ಕಾಯಿನ್ ಕುರಿತು ತನಿಖೆ ನಡೆದಿದೆ. ಅದನ್ನು ಹೊರತುಪಡಿಸಿ ಹೆಚ್ಚಿನ ತನಿಖೆ ನಡೆಸಬೇಕೆಂದು ಡಿಜಿ-ಐಜಿಪಿಗೆ ಮನವಿ ಮಾಡಿದ್ದೇನೆ. ಸರ್ಕಾರದ ಇ-ಪಕ್ಯೂರ್​ವೆುಂಟ್ ವೆಬ್​ಸೈಟ್ ಸಹ ಹ್ಯಾಕ್ ಆಗಿತ್ತು. ಇದರಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹ್ಯಾಕರ್​ಗಳು ಕೈ ಜೋಡಿಸಿರುವುದು ಕಂಡುಬಂದಿದೆ. ಇದರ ವ್ಯಾಪ್ತಿ ಹೆಚ್ಚಿದ್ದು, ವಿಶೇಷ ತನಿಖಾ ತಂಡದಿಂದ ಉನ್ನತ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದೇನೆ. ಯಾವ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಡಿಜಿ-ಐಜಿಪಿ ನಿರ್ಧರಿಸಲಿದ್ದಾರೆ’ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net