ಪರಿಶುದ್ಧ ದೇವತಾ ಕಾರ್ಯಕ್ಕೆ ಭಗವಂತನ ಕೃಪೆ

Bdk_deity work
Published on

ಬದಿಯಡ್ಕ: ಅಂತರಂಗ ಪರಿಶುದ್ಧತೆಯಿಂದ ಕೈಗೊಳ್ಳುವ ದೇವತಾ ಕಾರ್ಯ ಭಗವಂತನ ಕೃಪೆಗೆ ಕಾರಣವಾಗುತ್ತದೆ.

ರಾಗ-ದ್ವೇಷಗಳನ್ನು ಇಲ್ಲವಾಗಿಸಿ ಭಕ್ತಿ, ಪ್ರೇಮ, ಸತ್ಕರ್ಮ ಪಥದ ಮೂಲಕ ಸದ್ಗುಣ ಸಂಪನ್ನರಾಗಿ ನಾರಾಯಣನಲ್ಲಿ ಐಕ್ಯವಾಗುವ ಪ್ರಕ್ರಿಯೆ ಜೀವನದ ಲಕ್ಷೃವಾಗಿರಬೇಕು ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ನುಡಿದರು.

ಕಾರ್ಮಾರು ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಮಂಗಳವಾರ ರಾತ್ರಿ ನಡೆದ ತುಳುನಾಡ ಸಂಗಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಕಮಲಾದೇವಿ ಪ್ರಸಾದ ಆಸ್ರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಧ್ಯೇಯದೊಂದಿಗೆ ಬದುಕುವುದು ಮಾನವನ ಲಕ್ಷೃ. ಕರಾವಳಿ ನಾಡಿನ ಜನರ ಆಚಾರ-ವಿಚಾರ, ಆರಾಧನೆ, ಪರಂಪರೆಗಳ ಹಿಂದೆ ಸುವ್ಯವಸ್ಥಿತವಾದ ಧಾರ್ಮಿಕ ನೆಲೆಗಟ್ಟಿದೆ. ಬಹುಭಾಷೆ, ಬಹು ಸಂಸ್ಕೃತಿ, ಆರಾಧನೆ ಮೂಲಕ ನಡೆದು ಬರುತ್ತಿದ್ದು, ಯುವ ತಲೆಮಾರಿಗೆ ಇದನ್ನು ದಾಟಿಸುವ ಕಾರ್ಯ ದೇವಾಲಯ, ಮಠ, ಮಂದಿರಗಳ ಮೂಲಕ ಮೂಡಿ ಬರಬೇಕು ಎಂದರು.

ಉಲ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಧಾರ್ಮಿಕ ಉಪನ್ಯಾಸ ನೀಡಿದರು. ಡಾ.ನರೇಶ್ ರೈ ದೈಪ್ಪುಣಿಗುತ್ತು, ಶಂಕರ ರೈ ಮಾಸ್ತರ್, ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿದರು. ಗಣೇಶ್ ಉಳ್ಳೋಡಿ, ರಾಧಾಕೃಷ್ಣ ರೈ ಕಾರ್ಮಾರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿದರು. ಭಜನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯ್ಕ ನೀರ್ಚಾಲು ವಂದಿಸಿದರು. ಪತ್ರಕರ್ತ ಜಯ ಮಣಿಯಂಪಾರೆ ವಂದಿಸಿದರು.

ಕಿಶೋರ್ ಡಿ.ಶೆಟ್ಟಿ ನಿರ್ದೇಶನದಲ್ಲಿ ಲಕುಮಿ ತಂಡದವರಿಂದ ಒರಿಯೆ ಆಂಡಲಾ ಸರಿ ಬೋಡು ತುಳು ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net