ಬಲಿಪೀಠದಿಂದ ತಪ್ಪಿಸಿಕೊಂಡ ಬೆಕ್ಕು, ಆ ತಪ್ಪಿಗೆ ಮಗುವನ್ನೇ ಬಲಿ ಕೊಡಿ ಎಂದ ಭೂಪ

godman
Published on

ತಿರುವನಂತಪುರ: ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಯ ಆವರಣದಲ್ಲಿ ನಿಧಿ ಇದೆ. ಅದನ್ನು ಪತ್ತೆ ಮಾಡಿಕೊಡುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಕುಟುಂಬದ 5 ತಿಂಗಳ ಮಗುವನ್ನು ಬಲಿ ಕೊಡಲು ಹೇಳಿದ್ದ. ಪೊಲೀಸರಿಗೆ ವಿಷಯ ಗೊತ್ತಾಗುತ್ತಲೇ ತಲೆಮರೆಸಿಕೊಂಡಿದ್ದು, ಈತನ ಇಬ್ಬರು ಸಹಾಯಕರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಿರಣ್​ರಂಜನ್​ ತಲೆಮರೆಸಿಕೊಂಡಿರುವ ದೇವಮಾನವ. ತಿರುನಲ್ವೇಲಿ ಜಿಲ್ಲೆಯ ಕುಟುಂಬವೊಂದರ ಮುಖ್ಯಸ್ಥೆ ಪಾರ್ವತಿ ಅವರನ್ನು ಸಂಪರ್ಕಿಸಿದ್ದ ಕಿರಣ್​ರಂಜನ್​ 3.2 ಲಕ್ಷ ರೂ. ಕೊಟ್ಟರೆ ಮನೆ ಕಟ್ಟಿಕೊಡುವುದಾಗಿ ನಂಬಿಸಿದ್ದ. ಈತನ ಮಾತು ನಂಬಿದ್ದ ಪಾರ್ವತಿ ಹಣವನ್ನು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಕಿರಣ್​ರಂಜನ್​ ಮನೆ ಕಟ್ಟುವ ಕೆಲಸವನ್ನು ಆರಂಭಿಸಿದ್ದನಾದರೂ, ಉಳಿದ ಹಣವನ್ನು ಖರ್ಚು ಮಾಡಿಕೊಂಡಿದ್ದ. ಹಾಗಾಗಿ ಮನೆ ಕಟ್ಟುವ ಕಾಮಗಾರಿ ಮುಂದುವರಿಸಲು ಹಣಸಾಲದಾಗಿ, ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದ.

ಮನೆ ಪೂರ್ತಿಗೊಳಿಸಿಕೊಡುವಂತೆ ಕಿರಣ್​ರಂಜನ್​ನನ್ನು ಪಾರ್ವತಿ ಒತ್ತಾಯಿಸುತ್ತಿದ್ದರು. ಇದರಿಂದ ಆತಂಕಗೊಂಡ ಅರ್ಧ ನಿರ್ಮಾಣವಾಗಿರುವ ಸ್ಥಳದಲ್ಲಿ ನಿಧಿ ಇದೆ. ಆದ್ದರಿಂದ, ದೈವ ನಿರ್ಮಾಣ ಕಾಮಗಾರಿ ಮುಂದುವರಿಸಲು ಬಿಡುತ್ತಿಲ್ಲ. ತಾನು ದೇವಮಾನವ ಆಗಿರುವುದರಿಂದ, ನಿಧಿಯನ್ನು ತೆಗೆದುಕೊಡುತ್ತೇನೆ. ಅದಕ್ಕೆ ಪೂಜೆ ಮಾಡಿ ಒಂದು ಬೆಕ್ಕು ಮತ್ತು ಒಂದು ಕೋಳಿಯನ್ನು ಬಲಿಕೊಡಬೇಕು ಎಂದು ನಂಬಿಸಿದ್ದ.

ಈತನ ಮಾತು ನಂಬಿದ ಪಾರ್ವತಿ ಮತ್ತು ಅವರ ಪುತ್ರ ಪೂಜೆಗೆ ವ್ಯವಸ್ಥೆ ಮಾಡಿದ್ದಲ್ಲದೆ, ಬಲಿಕೊಡಲು ಒಂದು ಬೆಕ್ಕು ಮತ್ತು ಒಂದು ಕೋಳಿಯನ್ನು ಸಿದ್ಧಪಡಿಸಿದ್ದರು. ಸೋಮವಾರ ಪೂಜಾ ಕಾರ್ಯ ನಡೆಯುತ್ತಿರುವಾಗಲೇ ದುರದೃಷ್ಟವಶಾತ್​ ಬೆಕ್ಕು ತಪ್ಪಿಸಿಕೊಂಡಿತ್ತು. ಅಲ್ಲಿಗೆ ಪೂಜೆ ನಿಲ್ಲಿಸಿದ್ದ ಕಿರಣ್​ರಂಜನ್​ ಮರುದಿನ ಬಂದು ಪೂಜೆ ಮುಂದುವರಿಸುವುದಾಗಿಯೂ, ಬೆಕ್ಕಿನ ಬದಲು ಮಾನವ ಬಲಿ ಕೊಡಬೇಕಾಗುತ್ತದೆ. ಅದಕ್ಕಾಗಿ ಐದು ತಿಂಗಳ ಮೊಮ್ಮಗನನ್ನು ಬಲಿಗೆ ಸಿದ್ಧಪಡಿಸುವಂತೆ ಸೂಚಿಸಿ ಹೋಗಿದ್ದ.

ಈತನ ಮಾತು ನಂಬಿದ್ದ ಪಾರ್ವತಿ ಮತ್ತು ಆಕೆಯ ಪುತ್ರ 5 ತಿಂಗಳ ಮಗುವಿನ ಬಲಿಗೆ ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೇ ಇವರ ಸಂಬಂಧಿಕರೊಬ್ಬರಿಗೆ ವಿಷಯ ಗೊತ್ತಾಗಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಕಿರಣ್​ರಂಜನ್​ನನ್ನು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ಆತ ಅಲ್ಲಿಂದ ಪರಾರಿಯಾಗಿದ್ದ. ಕೊನೆಗೆ ಆತನ ಇಬ್ಬರು ಸಹಾಯಕರು ಸಿಕ್ಕಿಬಿದ್ದಿದ್ದರು. ಅವರನ್ನು ವಿಚಾರಿಸಿದಾಗ ಆತ ದೇವಮಾನವ ಅಲ್ಲ. ಆತನಿಗೆ ವಾಮಾಚಾರವೂ ತಿಳಿದಿಲ್ಲ. ಮದ್ಯವ್ಯಸನಿಯಾಗಿದ್ದ ಈತ ಪಾರ್ವತಿ ಅವರಿಂದ ಪಡೆದುಕೊಂಡಿದ್ದ ಹಣವನ್ನು ಖರ್ಚು ಮಾಡಿಕೊಂಡಿದ್ದ. ಮನೆ ನಿರ್ಮಾಣಕ್ಕೆ ಹಣ ಸಾಲದಾಗಿ ನಿಧಿಯ ಕತೆ ಕಟ್ಟಿದ್ದ ಎಂಬ ಸಂಗತಿ ಬಹಿರಂಗವಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕಲಕ್ಕಡ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಕಾಳಿಯಪ್ಪನ್​, ಕಿರಣ್​ರಂಜನ್​ ಎಸಗಿರುವ ಮೊದಲ ಕೃತ್ಯ ಇದಾಗಿದೆ. ಆತ ಹೇಳಿಕೊಂಡಿರುವಂತೆ ದೇವಮಾನವ ಅಲ್ಲ. ಆತನಿಗೆ ವಾಮಾಚಾರದ ವಿದ್ಯೆಯೂ ಗೊತ್ತಿಲ್ಲ. ಪರಾರಿಯಾಗಿರುವ ಆತನಿಗಾಗಿ ಶೋಧ ಕಾರ್ಯನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net